Saturday, March 31, 2007

ಅರಿಶಿನ ಕುಂಕುಮ-ನಾನೂ ನೀನೂ ಜೊತೆಯಿರಲೂ

ಚಿತ್ರ: ಅರಿಶಿನ ಕುಂಕುಮ (1970)
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ವಿಜಯಭಾಸ್ಕರ್
ಗಾಯಕರು: ಡಾಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿ















ಹಾಡು ಕೇಳಿ.

ನಾನೂ ನೀನೂ ಜೊತೆಯಿರಲೂ ಕಾಲದ ನೆನಪೇ ಬೇಕಿಲ್ಲ
ಋತುಗಳೂ ಕಾಲದ ಮಾತುಗಳೂ ಅವುಗಳ ಭೇದವೇ ನಮಗಿಲ್ಲಾ......ನಾನೂ ನೀನೂ...

ಕಣ್ಣೂ ಕಣ್ಣೂ ಕಲೆತಿರಲೂ
ಹಗಲೂ ಇರುಳಿನ ಅರಿವಿಲ್ಲ
ತುಟಿಯೂ ತುಟಿಯೂ ಸೇರಿರಲೂ
ಮಧುಮಾಸವೇ ಪ್ರತಿಕ್ಷಣವೆಲ್ಲಾ.....2....

ಮನಸೂ ಮನಸೂ ಬೆರೆತಿರಲೂ
ಅಂದವೇ ನೋಡಿದ ಕಡೆಯಿಲ್ಲಾ
ತನುವು ತನುವೂ ಬೆಸೆದಿರಲೂ
ಸ್ವರ್ಗವೇ ನಮಗೇ ಬಾಳೆಲ್ಲಾ......2....

ಸರಸದಿ ವೇಳೆಯು ಕಳೆದಿರಲೂ
ಬರಿ ಬೆಳದಿಂಗಳೇ ಬಿಸಿಲೆಲ್ಲಾ
ಪ್ರಣಯದ ಪಯಣವೂ ಸಾಗಿರಲೂ
ಹರುಷವೂ ನಮಗೇ ಬದುಕೆಲ್ಲಾ.....2....

ಒಲವಿನ ಗೀತೆಯ ಹಾಡುತಿರೇ
ಕಾಮನ ಬಿಲ್ಲಿನ ಬಣ್ಣಗಳೂ
ಪ್ರೇಮದ ಸವಿಯನು ಸವಿಯುತಿದೇ
ಬಾಳಿನ ಜೋಡಿಯ ಕಣ್ಣುಗಳೂ.....2.....

ನಾನೂ ನೀನೂ ಜೊತೆಯಿರಲೂ ಕಾಲದ ನೆನಪೇ ಬೇಕಿಲ್ಲಾ
ಋತುಗಳೂ ಕಾಲದಾ ಮಾತುಗಳೂ ಅವುಗಳ ಭೇದವೇ ನಮಗಿಲ್ಲಾ....ನಾನೂ ನೀನೂ...

* * * * * * * *

Monday, March 26, 2007

ಬಿಸಿಲಾದರೇನೂ


ಯ್ಯೋ ಮತ್ತೆ ಬಂತಲ್ಲಪ್ಪ ಈ ಬೇಸಿಗೆ. ಥೂ ಸಾಕಪ್ಪಾ ಸಾಕು ಈ ಚರ್ಮ ಸುಡೋ ಬಿಸಿಲು, ಧಗೆ, ಬೆವರು. ದಿನಕ್ಕೆ ಎರೆಡೆರಡು ಸಾರಿ ಸ್ನಾನಾ ಮಾಡೋ ಪರಿಸ್ಥಿತಿ. ಇದು ನನ್ನ ಸ್ಥಿತಿಯಾದರೆ ಅಮೇರಿಕದ ಜನರ ಪರಿಯೇ ಬೇರೆ. ಅವರಿಗೆ ಈ ಬಿಸಿಲುಗಾಲ ಎಂದರೆ ಅದೇನು ಖುಷಿ. ಬೇಸಿಗೆ ಬಂತೆಂದರೆ ಸಾಕು ಮನೆ ಮಂದಿಯೆಲ್ಲಾ ಬೀದಿಯಲ್ಲೇ ಇರುತ್ತಾರೆ what a nice weather ಅಂದುಕೊಂಡು. ಆದರೆ ನನಗೆ ಮೊದಲಿನಿಂದಲೂ ಬೇಸಿಗೆ ಬಂದರೆ ದ್ವಂದ್ವ ಅನುಭವ. ಬಿಸಿಲಿನ ತಾಪದ ಭಯವೊಂದು ಕಡೆಯಾದರೆ, ಬೇಸಿಗೆ ರಜಕ್ಕೆ ಅಜ್ಜಿ ಮನೆಗೆ ಹೋಗಿ ಮಜಾ ಮಾಡುವ ಖುಷಿಯೊಂದು ಕಡೆ. ಒಟ್ಟಿನಲ್ಲಿ ಬೇಸಿಗೆಯ ಬಿಸಿಲು ಮಾತ್ರ ಬೇಡ, ಬೇಸಿಗೆ ರಜಾ ಮಾತ್ರ ಬೇಕು ಅನ್ನುವಂತಾಗಿತ್ತು.

ಅಜ್ಜಿ ಮನೆಗೆ ಹೋಗಿದ್ದೇ ತಡ ಎಲ್ಲಾ ಮಕ್ಕಳು ಸೇರಿ ಮನೆಯೇ ತಲೆ ಕೆಳಗೆ ಮಾಡುತ್ತಿದ್ದುದು ಇನ್ನೂ ಮನದಲ್ಲಿ ಹಚ್ಚಹಸಿರು. ಸದಾ ಬಿಸಿಲಿನಲ್ಲಿ ಆಡುವ ನಮ್ಮನ್ನು ನೋಡಿ ದೊಡ್ಡವರು "ಏನು ಮಕ್ಕಳಪ್ಪಾ ಇವು ಇವಕ್ಕೆ ಬಿಸಿಲು ಮೈಗೇ ಹತ್ತುವುದಿಲ್ವೋ ಏನೋ" ಅಂತ ಬೈಯ್ಯುವಾಗಲೂ ಅವರ ಮಾತಿನಲ್ಲಿದ್ದ ಕಳಕಳಿ ಗೋಚರವೇ ಆಗುತ್ತಿರಲಿಲ್ಲ ಅನ್ನಿಸತ್ತೆ. ಮಕ್ಕಳು ಬಂದಿದ್ದಾರೆಂದು ಅಜ್ಜಿ ಪ್ರೀತಿಯಿಂದ ಮಾಡಿಕೊಡುತ್ತಿದ್ದ ತಿಂಡಿಗಳು, ಹೇಳುತ್ತಿದ್ದ ಕತೆಗಳು ಈಗಲೂ ಅದೆಂತಹ ಹಿತದ ಅನುಭವವನ್ನುಕೊಡುತ್ತದೆ. ಇಷ್ಟೆಲ್ಲದರ ನಡುವೆ ಬಿಸಿಲಿಗೆ ಬೇಸರಿಸಿ ಬೈಯ್ಯುತ್ತಿದ್ದ ನನಗೆ ಬೇಸಿಗೆ ಕಳೆದದ್ದೇ ತಿಳಿಯುತ್ತಿರಲಿಲ್ಲ. ಅಜ್ಜಿ-ತಾತ, ಮಾವಾ-ಅತ್ತೆ, ದೊಡ್ಡಪ್ಪ-ದೊಡ್ಡಮ್ಮಂದಿರ ಅಕ್ಕರೆಯ ತಂಪಿನಲ್ಲಿ ಮಿಂದೇಳುತ್ತಿದ್ದ ನನಗೆ ಬಹುಷ: ಬೇಸಿಗೆ ಬಿಸಿಲು ಮರೆತೇ ಹೋಗುತ್ತಿತ್ತೋ ಏನೋ? ಇನ್ನು ಸ್ಕೂಲು, ಹೋಂವರ್ಕ್, ಕಡಿಮೆ ಅಂಕ ತೆಗೆದರೆ ಸಿಗುತ್ತಿದ್ದ ಬೈಗಳ ಯಾವುದೂ ಇಲ್ಲ. ಇದೆಲ್ಲವೂ ಬೇಸಿಗೆಯಲ್ಲಿ ತಾನೇ ಲಭ್ಯ.

ಇವತ್ತಿಗೂ ನನಗೆ ಬೇಸಿಗೆ ಅಂದರೆ ಸಾಕು ಮುಖ ಮುದುರುತ್ತದೆ. ಮೊದಲಿನಂತೆ ರಜೆ ಬಂದರೆ ಅಜ್ಜಿ ಮನೆಗೆ ಓಡಿ ಆಡುತ್ತಿದ್ದ ಕಾಲವೇ ಮುಗಿದು ಹೋಗಿದೆ. ಆದರೂ ಆ ಹಿಂದಿನ ಬೇಸಿಗೆ ಕಾಲವನ್ನು ನೆನೆಸಿಕೊಳ್ಳುವುದೆಂದರೆ ನನಗೆ ತುಂಬಾ ಮೆಚ್ಚು. ಪ್ರೀತಿಯ ಮಳೆಗರೆಯುತ್ತಿದ್ದ ಆ ಹಿರಿಯ ಜೀವಗಳು ಕಣ್ಮರೆಯಾಗಿ ಎಷ್ಟೋ ಕಾಲ ಉರುಳಿದ್ದರೂ ಆ ಬೇಸಿಗೆ ರಜಾ ದಿನಗಳು ಈಗಲೂ ಕಾಡುತ್ತದೆ.

ಈಗ ಬರೀ ಬಿಸಿಲನ್ನು ಬೈದುಕೊಳ್ಳುತ್ತಾ ಯಾವಾಗ ಈ ಬೇಸಿಗೆ ಕಳೆದು ಮಳೆಗಾಲ ಶುರುವಾಗತ್ತೊ ಎಂದು ಕಾಯುವುದೇ ಕೆಲಸವಾಗಿದೆ. ಈ ದೇಶದಲ್ಲಂತೂ ಮೈಕೈಗೆ sunscreen ಅಥವಾ sunblock ಬಳಿದುಕೊಂಡು ಕಟುಬಿಸಿಲಿಗೆ ಮೈಯೊಡ್ಡಿ ಅರೆಬೆತ್ತಲೆ ಓಡಾಡುವವರನ್ನು ನೋಡಿ ನನಗ್ಯಾಕೆ ಈ ಬಿಸಿಲು ಹಿಂಸೆ ಅನ್ನಿಸುತ್ತದೆ ತಿಳಿಯದಾಗಿದೆ. ಈಗ ಇಲ್ಲಿ Daylight Saving ಅಂತೆ ರಾತ್ರಿ 9 ಗಂಟೆ ತನಕ ಕುದಿಯುವ ಬಿಸಿಲನ್ನು ಹೇಗಪ್ಪಾ ತಡೆದುಕೊಳ್ಳುವುದೂ ಅನ್ನಿಸುತ್ತಿದೆ.

ಬಾಲ್ಯದಲ್ಲಿ ನಾನು ಕಳೆದ ಈ ಮೂರೂ ಕಾಲಗಳ ನೆನಪು ನನ್ನ ಮನದಲ್ಲಿ ಅಚ್ಚಳಿಯದೆ ನಿಂತಿದೆ. ಮಳೆಗಾಲದಲ್ಲಿ ಶಾಲೆಗೆ ಹೋಗುವಾಗ Raincoat ಧರಿಸಿ ತಮ್ಮನ ಕೈ ಹಿಡಿದು ನಡೆಯುತ್ತಿದ್ದ ನೆನೆಪೊಂದಾದರೆ, ಚಳಿಗಾಲದಲ್ಲಿ ಅಮ್ಮ ಮಕ್ಕಳಿಗೆ ಚಳಿಯಾಗತ್ತೆ ಅಂತ ಸ್ವೆಟರ್ ಹಾಕಿ ಸ್ಕಾರ್ಪ್ ಕಟ್ಟಿ ಕಳಿಸುತ್ತಿದ್ದರೆ ಅಣ್ಣ ಮಕ್ಕಳಿಗೆ ತಣ್ಣೀರಿನಲ್ಲಿ ಕೈಕಾಲು ತೊಳೆದರೆ ಚಳಿಯಾಗತ್ತೆ ಅಂತ ಸದಾ ಹಂಡೆಒಲೆಗೆ ಹೊಟ್ಟು ತುಂಬಿ ಬಿಸಿನೀರು ಕಾಸಿ, ಅದೇ ಒಲೆಯಲ್ಲಿನ ಬೂದಿಕೆಂಡದಲ್ಲಿ ಹಲಸಿನಬೀಜ, ಗೆಣಸು ಸುಟ್ಟು ಕೊಡುತ್ತಿದ್ದ ನೆನಪು. ಇನ್ನು ಬೇಸಿಗೆಯಲ್ಲಿ ಅಣ್ಣ ನಮ್ಮ ಲಗ್ಗೇಜ್ ಹೊತ್ತು ತಂದು ಅಮ್ಮನನ್ನು ನಮ್ಮನ್ನು ರಜಕ್ಕೆ ಅಜ್ಜಿ ಮನೆಗೆ ಕಳಿಸಿಕೊಡುತ್ತಿದ್ದ ನೆನಪು. ಒಟ್ಟಿನಲ್ಲಿ ಮೂರು ಕಾಲವೂ ಸುಂದರ ನೆನಪುಗಳ ಆಗರ.

ಆದರೂ ಕಾಲಗಳು ಬಿಸಿಲಾದರೇನೂ ಮಳೆಯಾದರೇನೂ ಅಂತ ಒಂದನೊಂದು ಅಟ್ಟಿಸಿಕೊಂಡು ಬರುತ್ತಲೇ ಇವೆ. ಆ ಕಾಲದೋಟದಲ್ಲಿ ನಾವೂ ಎಷ್ಟೋ ಬಾರಿ ತಿರಿಗಿದ್ದಾಗಿದೆ ಇನ್ನೂ ತಿರುಗುತ್ತಲೇ ಇರುತ್ತೇವೆ. ಆದರೂ ಬೇಸಿಗೆ ಬಂದರೆ ಅದನ್ನು ಬೈಯ್ಯುವುದಂತೂ ತಪಿಲ್ಲ.

ಈ ವಿಷಯದಲ್ಲಿ ಬೇರೆಯವರ ಅಭಿಪ್ರಾಯಗಳು ಹೇಗೋ????

Sunday, March 25, 2007

ಮಹಾ ಪ್ರಚಂಡರು-ಶಿಲೆಯಲ್ಲು ನೀನೇ ಅಲೆಯಲ್ಲು ನೀನೇ

ಚಿತ್ರ: ಮಹಾ ಪ್ರಚಂಡರು(1981)
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕಿ: ಎಸ್.ಜಾನಕಿ
















ಹಾಡು ಕೇಳಿ
.





ಶಿಲೆಯಲ್ಲು ನೀನೇ ಅಲೇಯಲ್ಲು ನೀನೇ
ನಿನಕಂಡ ಎಲ್ಲೆಲ್ಲು ನಾ ಸ್ವಾಮೀ

ಈ ನೀಲಿ ಬಾನು ಆ ನೀಲಿ ಕಡಲೂ
ಈ ನಿನ್ನ ಮೈ ಬಣ್ಣವೇ ರಾಮಾ......ಶಿಲೆಯಲ್ಲು ನೀನೇ....

ನಗೋ ಹೂವಿನಲ್ಲಿ ಈ ಮೊಗವನ್ನು ಕಂಡೆ
ಬಿಳಿ ಹಾಲ ನೊರೆಯಲ್ಲಿ ಮನ:ಶಾಂತಿ ಕಂಡೆ
ನಿನ್ನ ಪಾದದಲ್ಲೀ ಆ......ಆ....ಆ...
ನಿನ್ನ ಪಾದದಲ್ಲೀ ಚಿದಾನಂದ ಕಂಡೆ
ನಾ ಕುಡಿದೆ ರಾಮಾಮೃತಾ ರಾಮಾ......ಶಿಲೆಯಲ್ಲು ನೀನೇ....

ನೀ ನೀಗು ಬಾರಾ ಈ ಮನದಂಧಕಾರಾ
ನಿನ್ನ ಪ್ರೇಮ ಸುಧೆಯಿಂದ ಸುಖವನ್ನು ತಾರಾ
ಓ ಮೇಘಶ್ಯಾಮಾ ಪರಿಪೂರ್ಣಧಾಮಾ
ಈ ದಿವ್ಯ ನಾಮಾ ಸದಾ ಶಾಂತಿಧಾಮಾ
ರಘುರಾಮ ಚರಣಾಮೃತಾ ರಾಮಾ......ಶಿಲೆಯಲ್ಲು ನೀನೇ...

* * * * * * * *

Tuesday, March 20, 2007

ಶ್ರೀಮಂತನ ಮಗಳು--ಬಂದಿದೇ ಹೊಸ ವಸಂತ

ಚಿತ್ರ: ಶ್ರೀಮಂತನ ಮಗಳು(1977)
ಸಾಹಿತಿ: ಚಿ.ಉದಯಶಂಕರ್
ಸಂಗೀತ: ಜಿ.ಕೆ.ವೆಂಕಟೇಶ್
ಗಾಯಕ: ಎಸ್.ಪಿ.ಬಾಲಸುಬ್ರಹ್ಮಣ್ಯಂ





















ಬಂದಿದೇ ಹೊಸ ವಸಂತ ಬಾಳಿನಲೀ
ಅನುಕ್ಷಣ ಹೊಸತನ ಸುಖವಾ ನಿನಗೇ ತರಲೀ..

ನಡೆವ ಹಾದಿ ಹೂವ ಹಾಸಲೀ
ನಗುತ ನಗುತ ಬಾಳು ಸಾಗಲೀ
ಹರುಷ ಪ್ರತಿ ನಿಮಿಷಾ ನಿನ್ನದಾಗಲೀ...

ಸ್ನೇಹವೆಂಬ ಬಳ್ಳಿ ಚಿಗುರಲೀ
ಪ್ರೇಮವೆಂಬ ಹೂವು ಅರಳಲೀ
ಬಯಕೆ ನಿನ್ನೆಣಿಕೇ ಭಾಗ್ಯ ನೀಡಲೀ...

ಬಂದಿದೇ ಹೊಸ ವಸಂತ ಬಾಳಿನಲೀ.....

* * * * * *

Sunday, March 18, 2007

ಯುಗ ಯುಗಾದಿ ಕಳೆದರೂ- ಕುಲವಧು














ಚಿತ್ರ: ಕುಲವಧು(1963)
ಕವಿ: ದ.ರಾ.ಬೇಂದ್ರೆ(ಅಂಬಿಕಾತನಯದತ್ತ)

ಸಂಗೀತ: ಜಿ.ಕೆ.ವೆಂಕಟೇಶ್
ಗಾಯನ: ಎಸ್.ಜಾನಕಿ



ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರಿತಿದೆ
ಹೊಸ ವರುಷಕೆ ಹೊಸ ಹರುಷವಾ ಹೊಸತು ಹೊಸತು ತರುತಿದೇ...

ಹೊಂಗೆ ಹೂವ ತೊಂಗಳಲಿ ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೇ
ಬೇವಿನ ಕಹಿ ಬಾಳಿನಲಿ ಹೂವಿನ ನಸುಗಂಪ ಸೂಸಿ
ಜೀವ ಕಳೆಯ ತರುತಿದೆ...

ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವ ದಾತಗೇ
ಒಂದೆ ಒಂದು ಜನ್ಮದಲಿ ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೇ ಏತಕೋ...

ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೋ
ಎಲೇ ಸನತ್ಕುಮಾರದೇವ ಎಲೇ ಸಾಹಸಿ ಚಿರಂಜೀವ
ನಿನಗೆ ಲೀಲೆ ಸೇರದೋ....

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೇ...


*** *** *** *** *** ***

Wednesday, March 14, 2007

ಮನೆ ಅಳಿಯ - ಪ್ರೀತಿಯ ಹೂಗಳ ಮುಡಿದವಳೇ

ಚಿತ್ರ: ಮನೆ ಅಳಿಯ(1964)
ಸಾಹಿತ್ಯ: ಕೆ.ಎಸ್.ನರಸಿಂಹಸ್ವಾಮಿ
ಸಂಗೀತ: ಟಿ.ಚಲಪತಿರಾವ್
ಗಾಯನ: ಪಿ.ಬಿ.ಶ್ರೀನಿವಾಸ್











ಪ್ರೀತಿಯ ಹೂಗಳ ಮುಡಿದವಳೇ
ಬಳುಕುವ ಬಳ್ಳಿಯ ಮೈಯ್ಯವಳೇ
ಬಾ ಬಾ ಬಾರೇ ಬಾ ಬಾ ಬಾರೇ ನನ್ನವಳೇ...

ಕರೆದಿದೆ ನಿನ್ನಾ ಮುಡಿಯರಳು
ಅರಿಯದೆ ಸಂಚನು ನಾನಿರಲು
ತಟ್ಟನೆ ಚಿನ್ನದ ಜಿಂಕೆಯೊಲು
ನೀ ಇನ್ನೆಲ್ಲಿಯೋ ಹಾರಿರಲು
ಬಾ ಬಾ ಬಾರೇ ಬಾ ಬಾ ಬಾರೇ ನನ್ನವಳೇ...

ಬಲ್ಲವನಲ್ಲವೆ ನಾ ನಿನಗೇ
ಎಲ್ಲೂ ಎಂದೂ ನಿನ್ನವನೇ
ನಾಚುವ ಮೊಗ್ಗೇ ಬಾ ಬಳಿಗೇ
ಆಸೆಯ ಬೀರುತ ನನ್ನೆಡೆಗೇ
ಬಾ ಬಾ ಬಾರೇ ಬಾ ಬಾ ಬಾರೇ ನನ್ನವಳೇ...

ಕಂಗಳ ಮುಚ್ಚಿದ ಕೈ ಬೆರಳೇ
ಪ್ರೀತಿಯ ನೋಟವ ಸಾರುತಿದೇ
ಉಕ್ಕುವ ಹರುಷದ ಹೊಳೆಯೊಳಗೇ
ಬಾ ಮೀಯುವ ಬಾರೇ ನನ್ನವಳೇ
ಬಾ ಬಾ ಬಾರೇ ಬಾ ಬಾ ಬಾರೇ ನನ್ನವಳೇ...


* * * * * * * * * * * * * * * * * * * * *

Sunday, March 11, 2007

ಮಧುರಸಂಗಮ-ತಾಯಿಯಾ ತಂದೆಯಾ

ಚಿತ್ರ:ಮಧುರಸಂಗಮ(1978)
ಸಾಹಿತ್ಯ:ಆರ್.ಎನ್.ಜಯಗೋಪಾಲ್
ಸಂಗೀತ:ರಾಜನ್-ನಾಗೇಂದ್ರ
ಗಾಯನ:ಎಸ್.ಜಾನಕಿ


ತಾಯಿಯಾ ತಂದೆಯಾ ಮಮತೆ ವಾತ್ಸಲ್ಯಾ
ಯಾವ ದೇವರೂ ನೀಡಬಲ್ಲ ಜಗದೆ ನಮಗೆಲ್ಲಾ....ತಾಯಿಯಾ...

ಸೃಷ್ಟಿ ಮಾಡುವ ಬ್ರಹ್ಮದೇವಾ
ಭಕ್ತ ಬಾಂಧವ ಮಹಾ ವಿಷ್ಣು
ಪ್ರಳಯಕಾಲಕ ಮಹಾದೇವ
ಹೆತ್ತ ಕರುಳನು ಕಾಣದೇ..೨..ಶಿಲೆಗಳಾದರು ಲೋಕದೇ....ತಾಯಿಯಾ...

ಧನವ ನೀಡುವ ಧರ್ಮದಾತ
ವಿದ್ಯೆ ಕಲಿಸುವ ಪಾಠಶಾಲೇ
ನೀತಿ ಹೇಳುವ ಈ ಸಮಾಜ
ತಂದೆ ಪ್ರೀತಿಯ ತೋರ್ವರೇ..೨..ತಾಯಿ ಮಮತೆಯ ಕೊಡುವರೇ....ತಾಯಿಯಾ...

*** *** *** ***

Friday, March 09, 2007

ಜಾರತ್ವವನು ಮಾಡಿದ- ಶ್ರೀ ವ್ಯಾಸರಾಜರು

ಶ್ರೀ ವ್ಯಾಸರಾಜರ ಆರಾಧನಾ ಪ್ರಯುಕ್ತ.

ಉಗಾಭೋಗ: ಜಾರತ್ವವನು ಮಾಡಿದ ಪಾಪಗಳಿಗೆಲ್ಲಾ
ರಚನೆ: ಶ್ರೀ ವ್ಯಾಸರಾಜ ತೀರ್ಥರು.




ಜಾರತ್ವವನು ಮಾಡಿದ ಪಾಪಗಳಿಗೆಲ್ಲಾ
ಗೋಪೀಜನ ಜಾರನೆಂದರೆ ಸಾಲದೇ

ಚೋರತ್ವವನು ಮಾಡಿದ ಪಾಪಗಳಿಗೆಲ್ಲ
ನವನೀತ ಚೋರನೆಂದರೆ ಸಾಲದೇ

ಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲ
ಮಾವನ ಕೊಂದವನೆಂದರೆ ಸಾಲದೇ

ಪ್ರತಿ ದಿವಸ ಮಾಡಿದ ಪಾಪಂಗಳಿಗೆಲ್ಲಾ
ಪತಿತ ಪಾವನನೆಂದು ಕರೆದರೆ ಸಾಲದೇ

ಇಂತಿಪ್ಪ ಮಹಿಮೆಗಳನೊಂದನಾದರೂ ಒಮ್ಮೆ
ಸಂತಸದಿ ನೆನೆಯುವರಾ ಸಲಹುವಾ ಶ್ರೀಕೃಷ್ಣಾ .....


*******ಶ್ರೀಕೃಷ್ಣಾರ್ಪಣಮಸ್ತು********

ಈ ಮುದ್ದು ಕೃಷ್ಣನ - ಯತಿಶ್ರೀ ವಾದಿರಾಜರು

ಗುರುಶ್ರೀ ವಾದಿರಾಜರ ಆರಾಧನಾ ಪ್ರಯುಕ್ತ.

ದೇವರನಾಮ- ಈ ಮುದ್ದು ಕೃಷ್ಣನ ಕ್ಷಣದ ಸುಖವೇ ಸಾಕು
ರಚನೆ - ಶ್ರೀ ವಾದಿರಾಜರು.



ಈ ಮುದ್ದು ಕೃಷ್ಣನ ಕ್ಷಣದ ಸುಖವೇ ಸಾಕು ಪ
ಶ್ರೀ ಮಧ್ವಮುನಿ ತಂದ ಉಡುಪೀಶನಾ ಅಪ

ಚಲುವ ಚರಣದ್ವಂದ್ವ ಝಂಘೆಜಾನೂರುಕಟಿ
ವಳಿ ಪಂಕ್ತಿ ಜಠರ ವಕ್ಷಸ್ಕಂಬುತಂಧರದಿ
ನಳಿತೋಳು ಮುದ್ದು ಮುಖ ನಳಿನ ನಾಸಿಕ ಕರ್ಣ
ಸುಳಿಗುರುಳ ಮಸ್ತಕದ ನಳಿನನಾಭನ ಸೊಬಗು ೧

ಕಿರುಗೆಜ್ಜೆ ಕಡಿಪೆಂಡೆ ಘಂಟಾ ಕಟಿಸೂತ್ರ
ವರಹಾರ ಪದಕ ಶ್ರೀ ವತ್ಸ ಕೌಸ್ತುಭ ರತ್ನ
ಉರುಮುದ್ರೆ ಕಂಕಣಾಂಗದ ಕುಂಡಲ ಪ್ರಭಾ
ಸಿರಿನಾಮ ಮುಕುಟ ನಾಸಿಕ ಮಣಿಯ ೨

ಸಕಲ ದೇವೋತ್ತಮನೆ ಸರ್ವಗುಣ ಸಂಪೂರ್ಣ
ಅಖಿಳಾಗ ಮಸ್ತುತನೆ ಅಪ್ರಾಕೃತನೆ
ಅಖಿಳ ಜೀವರ ಭಿನ್ನನೆನಿಪ ಹಯವದನನ
ಮುಕುರ ಕಡೆಗೋಲು ನೇಣು ಸಹಿತ ಪಿಡಿದಿಹ ಸ್ವಾಮಿ ೩

********** ಶ್ರೀ ಕೃಷ್ಣಾರ್ಪಣಮಸ್ತು **********

Wednesday, March 07, 2007

ನೀ ಬರುವ ದಾರಿಯಲಿ - ಕೆ.ಎಸ್.ನರಸಿಂಹಸ್ವಾಮಿ

ಕವನ: ನೀ ಬರುವ ದಾರಿಯಲಿ
ಕವಿ: ಕೆ.ಎಸ್.ನರಸಿಂಹಸ್ವಾಮಿ.




ನೀ ಬರುವ ದಾರಿಯಲಿ ಹಗಲು ತಂಪಾಗಿ
ಬೇಲಿಗಳ ಸಾಲಿನಲಿ ಹಸುರು ಕೆಂಪಾಗಿ
ಪಯಣ ಮುಗಿಯುವ ತನಕ ಎಳೆ ಬಿಸಿಲ ಮಣಿ ಕನಕ
ಸಾಲು ಮರಗಳ ಮೇಲೆ ಸೊಬಗ ಸುರಿದಿರಲಿ


ನೀ ಬರುವ ದಾರಿಯಲಿ ಹಕ್ಕಿಗಳು ಹಾಡಿ
ಬೆಳ್ದಿಂಗಳಿಂಪಿನಲಿ ತಾರೆಗಳು ಮೂಡಿ
ಕನಸು ಹಬ್ಬಲಿ ನಿನ್ನ ಕಣ್ಣ ಬಳಿ ಚಿನ್ನ
ಹತ್ತಾರು ಗಳಿಗೆಯಲಿ ಹಾದಿ ಹಾರಿರಲಿ


ನೀ ಬರುವ ದಾರಿಯಲಿ ಬನದೆಲರು ಸುಳಿದೂ
ಸಂತಸದ ಇರುಳಿನಲಿ ಆದುದನು ನುಡಿದು
ಮುಂದೆ ಕಾದಿಹ ನೂರು ಹರುಷಗಳು ಕಣ್ ತೆರೆದು
ಪಯಣವೋ ನಿಲುಗಡೆಯೋ ನೀನರಿಯದಂತಿರಲಿ


------ ------- ------ ------- ------

Friday, March 02, 2007

ಮರಳಿಗೂಡಿಗೆ-ನೀ ನುಡಿಯದಿರಲೇನೂ...

ಚಿತ್ರ: ಮರಳಿಗೂಡಿಗೆ (1984)
ಸಾಹಿತ್ಯ: ಕೆ.ಎಸ್.ನಿಸ್ಸಾರ್ ಅಹಮದ್
ಸಂಗೀತ: ರಾಜನ್-ನಾಗೇಂದ್ರ
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ















ನೀ ನುಡಿಯದಿರಲೇನೂ ಬಯಲಾಗಿಹುದು ಎಲ್ಲಾ
ಕಣ್ಣಂಚಿನಾ ಕೊನೆಯಾ ಭಾವದಲ್ಲೀ
ಬಗೆನೋವ ಭಾರಕ್ಕೇ ಬಳಲಿರುವ ಮೊಗವಿಹುದೂ
ಕಾರ್ಮೋಡದಾಗಸದಾ ರೀತಿಯಲ್ಲೀ....


ಬಾಡಿರುವ ಮೊಗದಲ್ಲಿ ಕಳೆಯಿರದ ಕಣ್ಣಲ್ಲೀ
ನಿನ್ನ ಸಿರಿವಂತಿಕೆಯಾ ಕಾಣುವಾಸೇ
ಸೊಗವಿರದ ತುಟಿಯಲ್ಲಿ ತೂಗಿರುವ ನಗೆಯಲ್ಲಿ
ಸವಿಗನಸಿನಿರುಳುಗಳಾ ಹುಡುಕುವಾಸೇ...


ಅರೆಗಳಿಗೆ ಸುಖಸ್ವಪ್ನಾ ಬರಲಾರದೆಮ್ಮೊಡನೇ
ವಾಸ್ತವತೆ ಗಹಗಹಿಸೀ ಸೆಳೆಯಲಿಹುದೂ
ಮರೆತೆಲ್ಲ ಕೊನೆಗೊಮ್ಮೇ ಮನಬಿಚ್ಚಿ ನಕ್ಕುಬಿಡೂ
ಬೇರೆ ದಾರಿಯ ನಾವು ಹಿಡಿಯಬಹುದೂ....

****** ****** ****** ******