ನಿಜದ ಸಂತಸದಲ್ಲಿ-ಕೆ.ಎಸ್.ನರಸಿಂಹಸ್ವಾಮಿ
ರಚನೆ: ಕೆ.ಎಸ್.ನರಸಿಂಹಸ್ವಾಮಿ
ನಿಜಸಂತಸದಲ್ಲಿ ಬಿರಿದ ಮಲ್ಲಿಗೆಯಿಂದ
ಬರುವ ಕಂಪಿನ ಹೆಸರು ಪ್ರೇಮವೆಂದು
ನೀಲಾಂತರಿಕ್ಷದಲಿ ಹೊಳೆವ ನಕ್ಷತ್ರಗಳ
ಕಣ್ಣ ಸನ್ನೆಯ ಹೆಸರು ಪ್ರೇಮವೆಂದು...
ಹಸಿರು ಬಯಲಿಗೆ ಇಳಿದ ಬಿಳಿಬಿಳಿಯ ಹಕ್ಕಿಗಳ
ದೂರದಿಂಪಿನ ಹೆಸರು ಪ್ರೇಮವೆಂದು
ಮಾಲಗಣ್ಣಿನ ಹೆಣ್ಣೆ ನಿನ್ನ ತುಟಿಯಿಕ್ಕೆಲದಿ
ಮಂದಹಾಸದ ಹೆಸರು ಪ್ರೇಮವೆಂದು...
ಯಾವುದೋ ಕನಸಿನಲಿ ಯಾರೋ ಹಾಡಿದ ಹಾಡು
ಮಿಡಿದ ಹೃದಯದ ಹೆಸರು ಪ್ರೇಮವೆಂದು
ಬಳಿಗೆ ಬಾರೆನ್ನವಳೆ ಬಿಗಿದಪ್ಪಿ ಮಾತಾಡು
ನಾನದನೆ ಕರೆಯುವೆನು ಪ್ರೇಮವೆಂದು...
ಬಾರೆನ್ನ ಮನದನ್ನೆ ಬರಲಿ ಹತ್ತಿರ ಕೆನ್ನೆ
ಮುತ್ತಿನಲಿ ಒಂದಾಗಿ ಎರಡು ಜೀವ
ಬಾಳಿನೇರಿಳಿತಗಳ ಮುಗಿದಿರದ ಪಯಣಕ್ಕೆ
ಶುಭವ ಕೋರಲಿ ಸುಳಿದು ಧನ್ಯಭಾವ...
(ಕೆ.ಎಸ್.ನರಸಿಂಹಸ್ವಾಮಿ ಅವರು ಬರೆದಿರುವ 'ಇರುವಂತಿಕೆ' ಕವನ ಸಂಕಲನದಿಂದ)
10 comments:
ತುಂಬ ಒಳ್ಳೆಯ ಹಾಡು ಕೊಟ್ಟಿದೀಯಾ ಮೀರಾ!
ಧನ್ಯವಾದಗಳು ತ್ರಿವೇಣಿ. 'ಇರುವಂತಿಕೆ' ಕವನ ಸಂಗ್ರಹ ನನಗೆ ತುಂಬಾ ಇಷ್ಟ. ಆದರೆ ಅದರಲ್ಲಿ ಕೇವಲ ಎರಡು ಮಾತ್ರ ಹಾಡಿನ ರೂಪದಲ್ಲಿ ಕೇಳಿದ್ದೇನೆ. ಅದು 'ನನ್ನವಳು ನನ್ನೆದೆಯ' ಮತ್ತು 'ಹಕ್ಕಿಯ ಹಾಡಿಗೆ ತಲೆದೂಗುವ ಹೂ'. ಈ ಕವನಗಳು ಕೇಳಲು ಎಲ್ಲಾದರೂ ಸಿಗುತ್ತದೆಯಾ ದಯವಿಟ್ಟು ತಿಳಿಸು.
"ಹಕ್ಕಿಯ ಹಾಡಿಗೆ "ತುಳಸಿವನದಲ್ಲಿದೆ. ನನ್ನವಳು ನನ್ನೆದೆಯ "ಸರ್ವಮಂಗಳ" ಚಿತ್ರದಲ್ಲಿ ಬಳಕೆಯಾಗಿದೆ. MIOನಲ್ಲಿದೆ.
ನಿಮ್ಗೆ ನಾಳೆ ಹಬ್ಬ ಅಲ್ವ ? ಯಾವ್ದಾದ್ರು ಎಸ್.ಜೆ ದು ಅಪರೂಪದ ಹಾಡು ಹಾಕ್ತಿರೇನು ? ನೀವೆಲ್ಲೊ ಒಂದ್ ಸಲ "ಭಾಗ್ಯ ಜ್ಯೋತಿ" ಚಿತ್ರದ ಪಿ.ಬಿ.ಎಸ್ ಹಾಗು ವಾಣಿ ಜೈರಾಂ ಹಾಡಿರೊ ಒಂದು ಸಂಸ್ಕೃತ ಹಾಡ್ ಗೊತ್ತು ಅಂತ ಬರ್ದಿದ್ರಿ. ಅದು ಹಾಕ್ಲಿಕ್ಕಾದ್ರೆ ಹಾಕಿ, ಪುಣ್ಯ ಕಟ್ಟ್ಕೊಳಿ.
ಏನು ಹಬ್ಬ ನಾಳೆ???? ನೆನಪಿಗೆ ಬರ್ತಿಲ್ಲ. ಎಸ್.ಜಾನಕಿ ಹಾಡು ಅಂದ್ರೆ ನಾನು ಯಾವಾಗ್ಲೂ ರೆಡಿ.ಖಂಡಿತ ಹಾಕುತ್ತೇನೆ.
ಹೌದು ನಾನು ಹಿಂದೆ ’ಭಾಗ್ಯಜ್ಯೋತಿ’ ಚಿತ್ರದ ಸಂಸ್ಕೃತ ಹಾಡಿನ ಬಗ್ಗೆ ಬರೆದಿದ್ದೆ. ಆದರೆ ದುರದೃಷ್ಟವಶಾತ್ ಆ ಹಾಡಿನ ಸಾಹಿತ್ಯ ನನಗೆ ಪೂರ್ತಿ ನೆನಪಿಲ್ಲ. ಸಿಕ್ಕಾಗ ಖಂಡಿತ ಹಾಕುತ್ತೇನೆ.
ನಾಳೆ ಎಸ್.ಜೆ ಅವ್ರ ಹುಟ್ಟು ಹಬ್ಬ ಅಲ್ವ ?
"ಮಾಲಗಣ್ಣು" ಅಂದ್ರೇನು ?
'Iruvantige' bhavageethe album nalli ee kavana sankalanada kelavu haadugaLu keLabahudu
ಶಾಂತಲಾ ನೀವು ಹಬ್ಬ ಅಂತ ಇದಕ್ಕೇ ಅಂದಿರಬಹುದು ಅಂತ ಊಹಿಸಿದ್ದೆ ಅದೇ ಬರೆದಿದ್ದೀರಾ.
ನನಗೆ ಗೊತ್ತಿದ್ದಂತೆ ಮಾಲಗಣ್ಣು ಅಂದ್ರೆ Look in London talk in Tokiyo ಅಂತ ಆದರೆ ಇಲ್ಲಿ ನೋಡಿದ್ರೆ ಬಹುಷ: ವಾರೆಗಣ್ಣಿನ ತುಂಟ ನೋಟ ಅಂತಿರಬಹುದು.
ಕಿರಣ್, ನಿಮಗೆ ’ಖಜಾನೆ’ಗೆ ಸ್ವಾಗತ. ಕೆ.ಎಸ್.ಎನ್ ಅವರ ’ಇರುವಂತಿಕೆ’ ಆಲ್ಬಂ ಎಲ್ಲಾದರೂ ಕೇಳಲು ಸಿಗುತ್ತದೆಯೇ? ಕೊಂಡಿಯೇನಾದರೂ ಇದ್ದರೆ ದಯಮಾಡಿ ತಿಳಿಸಿ, ಎರಡೇ ಹಾಡನ್ನು ನಾನು ಕೇಳಿರುವುದು.
Post a Comment