Tuesday, February 27, 2007
Sunday, February 25, 2007
ಧಾರಾ(ಕಾರ)ವಾಹಿಗಳು
ಈಗ ಬರುತ್ತಿರುವ ಧಾರಾವಾಹಿಗಳ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ತುಳಸೀವನದಲ್ಲಿ ಕಿರುತೆರೆ-ಕಿರಿಕಿರಿ ಲೇಖನ ಓದುವಾಗ ಈಗಿನ ದಾರವಾಹಿಗಳ ಬಗೆಗೆ ನನ್ನ ಅನಿಸಿಕೆ ಮತ್ತು ಅಭಿಪ್ರಾಯ.
ಈಗಿನ ಧಾರಾವಾಹಿಗಳ ಕುರಿತು ಹೇಳಬೇಕೆಂದರೆ ಮೊದಲಿಗೆ ಒಂದು ಮೊಲಕತೆಯನ್ನು ತೆಗೆದುಕೊಂಡು ಅದನ್ನು ಎದ್ವಾತದ್ವಾ ಎಳೆದು ದಾರವಾಹಿಗಳನ್ನು ಧಾರಾಕಾರವಾಗಿ ಎಳೆದಾಡುತ್ತಾರೆ. ಇನ್ನು ಈಗ ತೆಗೆಯುತ್ತಿರುವ ಎಲ್ಲಾ ಧಾರಾವಾಹಿಗಳು ಸಾಮಾನ್ಯವಾಗಿ ಒಂದೇ ಥರದ ಕತೆಗಳನ್ನು ಹೊಂದಿರುತ್ತವೆ ಅನ್ನಿಸುತ್ತದೆ. ಮನೆಯಲ್ಲಿ ನಡೆಯುವ ಎಲ್ಲಾ ರಾಜಕೀಯದ ಬಗ್ಗೆ ಸುಳಿವೇ ತಿಳಿಯದಂತಿರುವ ಪೆದ್ದು ಗಂಡಸರು, ಮುಖದ ತುಂಬಾ ಮೇಕಪ್ ಮೆತ್ತಿಕೊಂಡು(ಬೆಳಿಗ್ಗೆ ಏಳುವಾಗಲೇ) ಚಾಡಿಮಾತು, ಹೊಟ್ಟೆಕಿಚ್ಚು ಮತ್ತು ಯಾವುದೋ ದ್ವೇಷದಿಂದ ಸಂಸಾರವನ್ನೇ ನುಚ್ಚುನೂರು ಮಾಡಲು ಹೊರಡುವ ಕೆಟ್ಟ ಹೆಣ್ಣುಗಳು, ಈ ಥರದ ದಾರಾವಾಹಿಗಳು ಈಗ ಎಲ್ಲಾ ಭಾಷೆಯಲ್ಲೂ ಕಾಣಬರುತ್ತಿರುವ ಚಿತ್ರಗಳು. ಇನ್ನೂ ಎಲ್ಲಕ್ಕಿಂತ ಮುಖ್ಯವಾದ್ದು ಏನೆಂದರೆ 'ಒಬ್ಬ ಗಂಡಸು ಅಥವಾ ಹೆಂಗಸರು ಎಷ್ಟು ಬೇಕಾದರೂ ಅನೈತಿದ ಸಂಬಂಧವನ್ನು ಹೊಂದಿರುವಂತೆ ತೋರಿಸುವುದು' ಇದು ತೀರಾ ಅಸಹ್ಯವನ್ನು ಮೂಡಿಸುವಂತಾದ್ದು. ನೈತಿಕತೆಯನ್ನೇ ಮರೆತು ವಿವಾಹೇತರ ಸಂಬಂಧಗಳು ಬಹಳ ಮಾಮೂಲು ಎನ್ನುವಂತೆ ತೋರಿಸಹೊರಟಿದ್ದಾರೆ. ಸತ್ತ ವ್ಯಕ್ತಿ ಮತ್ತೆ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗುವುದು. ಇದ್ದಕ್ಕಿದ್ದಂತೆ ಪಾತ್ರಗಳೇ ಬದಲಾಗಿಹೋಗುವುದು. ಮಾಮೂಲಾಗಿಬಿಟ್ಟಿದೆ. ಈಗ ಸಿನೆಮಾಗಳಲ್ಲಿ ಬರುವಂತೆ ಹಾಡುಗಳು(ಹಿಂದಿ ಧಾರಾವಾಹಿಗಳಲ್ಲಿ) ಮತ್ತು ಹೊಡೆದಾಟಗಳು ಕಾಣತೊಡಗಿವೆ. ಇನ್ನು ಏನಾದರೂ ನಡೆದರೆ ಕೆಟ್ಟ ಶಬ್ಧದಿಂದ ಆ ಪಾತ್ರಧಾರಿಗಳನ್ನು ಎಲ್ಲಾ ಕೋನದಿಂದಲೂ ತೋರಿಸೋದ್ರಲ್ಲಿ ಧಾರಾವಾಹಿ ಮುಗಿದಿರುತ್ತದೆ.
ಇನ್ನು ನಮ್ಮವರು ಸಿನೆಮಾದಂತೆ ಧಾರಾವಾಹಿಗಳನ್ನು ನಕಲು ಮಾಡುವುದೂ ಇದ್ದಕ್ಕಿದ್ದಂತೆ ಶುರುವಾಗಿದೆ. ಉದಾ: ತಮಿಳಿನ ಕೋಲಂಗಳ್-ಕನ್ನಡದ ರಂಗೋಲಿ, ತಮಿಳಿನ ಸ್ವರ್ಗಂ-ಕನ್ನಡದ ಸಂಸಾರ, ತಮಿಳಿನ ಮಾಂಗಲ್ಯಂ-ಕನ್ನಡದ ಮಾಂಗಲ್ಯ ಇತ್ಯಾದಿ ಇತ್ಯಾದಿ.
'ನಮಗೂ ಉದಯ ಟೀವಿ ಬರ್ತಾ ಇದೆ ಅದು ಬಂದ ಮೇಲೆ ನನಗೆ ಒಳ್ಳೇ time-pass' ಅಂತ ಖುಷಿಯಿಂದ ಹೇಳಿದ ನನ್ನ ಗೆಳತಿಗೆ ಹೊಸದರಲ್ಲಿ ಹಾಗೇ ಆಮೇಲೆ ಗೊತ್ತಾಗತ್ತೆ ಅಂದುಕೊಂಡೆ. ಬೆಳಿಗ್ಗೆ ಒಂದು ಸಿನೆಮಾ ಹಾಕಿದರಾಯ್ತು ಮತ್ತೆ ಮಧ್ಯಾನ್ಹದಿಂದಾ ರಾತ್ರಿ ಮಲಗುವವರೆಗೂ ಧಾರಾವಾಹಿಗಳ ಧಾರಾಕಾರ.
ಈಗ ನನಗೆ ಉದಯ ಟೀವಿ ನೋಡಲು ಸಿಗುತ್ತಿಲ್ಲ. ಹಿಂದಿ ಧಾರಾವಾಹಿಗಳು Z TV ಮತ್ತು SONY ಇಂದ ನೋಡಲು ಸಿಗುತ್ತಿದೆ. ಅವುಗಳಂತೂ ಇಲ್ಲಿಯದಿಕ್ಕಿಂತಾ ಅಧ್ವಾನ. ಒಬ್ಬ ವ್ಯಕ್ತಿ (ಗಂಡು ಅಥವಾ ಹೆಣ್ಣು) ನಾಲ್ಕಕ್ಕಿಂತ ಹೆಚ್ಚು ಅನೈತಿಕ ಸಂಬಂಧವನ್ನು ಹೊಂದಿರುತ್ತಾರೆ. ಅದರಲ್ಲಿ 'ಸಿಂಧೂರ್ ತೇರೆ ನಾಮ್ ಕೆ', 'ಕಸಂ ಸೆ', 'ಮಮತಾ', ಮತ್ತು 'ಸಾತ್ ಫೇರೇ' ಈ ದಾರಾವಾಹಿಗಳಲ್ಲಿ ಕೂಡ ವಿವಾಹೇತರ ಸಂಬಂಧಗಳು ಅನ್ನುವ ಹೊಲಸಲ್ಲಿ ಹೊರಳಾಡಿಸಿದ್ದಾರೆ.
ಇಂಥಹ ಅಸಂಭದ್ದ ಕತೆಗಳನ್ನು ಹೆಣೆದು, ಅನೈತಿಕತೆ ಇಂದಿನ ಜೀವನದಲ್ಲಿ ಸಾಮಾನ್ಯ, ದ್ವೇಷ, ಅಸೂಯೆ ಮತ್ತು ಹೊಟ್ಟೆಕಿಚ್ಚಿನಿಂದ ಸಂಸಾರವನ್ನು ಹೇಗೆ ಹಾಳುಮಾಡಬಹುದು ಎಂದು ಜನಗಳಿಗೆ ಪಾಠ ಹೇಳುತ್ತಿರುವ ಈ ಕಿರುತೆರೆ ಮಾಧ್ಯಮಗಳಿಗೆ ಕಡಿವಾಣ ಹಾಕುವವರು ಯಾರು? ಇದೇ ಮುಂದುವರೆದರೆ ನಮ್ಮ ಮುಂದಿನ ಜನಾಂಗ ಎಲ್ಲಿ ಹೋಗಿ ಮುಟ್ಟುತ್ತದೆ ? ಇಷ್ಟೆಲ್ಲಾ ಬೈದಾಡಿದರೂ ದಿನ ಬೆಳಗಾದರೆ ಇದಕ್ಕಾಗಿ ಟೀ.ವಿ ಮುಂದೆ ಕೂರುವ ನಮ್ಮಂತಹವರು ಎಲ್ಲಿಯವರೆಗೆ ಇವರುಗಳಿಗೆ ಶಾಪ ಹಾಕುವುದು?.
ಇಷ್ಟೆಲ್ಲಾ ಮಧ್ಯದಲ್ಲಿಯೂ ಹಿಂದಿ ನಟಿಯಾದ 'ಅರುಣಾ ಇರಾನಿ' ಅವರು ಕೆಲವು ಒಳ್ಳೇ ಧಾರಾವಾಹಿಗಳನ್ನು ಮಾಡಿದ್ದಾರೆ ಅದರಲ್ಲಿ ನನಗೆ ಇಷ್ಟವಾದದ್ದು 'ತುಂ ಬಿನ್ ಜಾವೂ ಕಹಾ' (ಪುನರ್ಜನ್ಮ ಕುರಿತಾದ ಕತೆ), 'ಮೆಹೆಂದಿ ತೆರೆ ನಾಮ್ ಕೀ' (ಇದರಲ್ಲಿ ಐದು ಜನ ಹೆಣ್ಣು ಮಕ್ಕಳನ್ನು ಪಡೆದ ತಾಯಿ ತನ್ನ ಒಂದೊಂದು ಮಕ್ಕಳನ್ನು ದಡ ಸೇರಿಸುವುದು ಮತ್ತು ಮಕ್ಕಳು ತಾಯಿಯ ಕಷ್ಟ ಅರಿತು ಜೀವನದ ದಾರಿಯನ್ನು ಆರಿಸಿಕೊಳ್ಳುವ ಕತೆ) ಇನ್ನು ತೀರಾ ಇತ್ತೀಚೆಗೆ ಬಂದ 'ವೈದೇಹಿ- ಔರ್ ಏಕ್ ಅಗ್ನಿಪರೀಕ್ಷಾ', (ನಪುಂಸಕ ಗಂಡೊಂದಿಗೆ ಮದುವೆಯಾಗಿ ಅವನಿಂದ ಬಿಡಿಸಿಕೊಳ್ಳಲು ಹೆಣಗುವ ಕತೆ) ಈ ಎಲ್ಲಾ ಕತೆಗಳಲ್ಲೂ ಸ್ವಯಂ ಅರುಣಾ ಅವರು ಸ್ವತ: ಅಭಿನಯಿಸಿ ಅಮೋಘವಾದ ಕತೆಗಳಿಂದ ಒಳ್ಳೊಳ್ಳೇ ಧಾರಾವಾಹಿಗಳನ್ನೂ ತೆಗೆಯಬಹುದು ಅನೋದನ್ನು ತೋರಿಸಿಕೊಟ್ಟಿದ್ದಾರೆ. ಇವುಗಳಂತೂ ಕೇವಲ 13 ರಿಂದ 16 ಕಂತುಗಳಲ್ಲಿ ಪ್ರಸಾರವಾಗಿವೆ ಅಂದರೆ ಆಶ್ಚರ್ಯವಾಗುತ್ತದೆ. ಇಂಥಹ ಧಾರಾವಾಹಿಗಳಿಗೆ ಹೃತ್ಫೂರ್ವಕ ಸ್ವಾಗತ.
Labels: ಧಾರಾ(ಕಾರ)ವಾಹಿಗಳು
Tuesday, February 20, 2007
ವಿಜಯನಗರದ ವೀರಪುತ್ರ - ಅಪಾರ ಕೀರ್ತಿ

ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ವಿಶ್ವನಾಥ್- ರಾಮಮೂರ್ತಿ
ಗಾಯನ: ಡಾ. ಪಿ.ಬಿ.ಶ್ರೀನಿವಾಸ್.
ಆಗಸದಿ ತೇಲುತಿದೇ ಮೋಡಾ
ನೆರೆನೋಟ ಹರಿದಂತೆ ಪಸರಿಸಿಹ ಗಿರಿಪಂಕ್ತೀ
ಹಸಿಹಸಿರು ವನರಾಜಿ ನೋಡಾ....
ಅಪಾರ ಕೀರ್ತಿಗಳಿಸಿ ಮೆರೆವ ಭೌವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಮಾತೆ ತುಂಗಭದ್ರೇ ಹರಿಯುತಿಹಳು ಇಲ್ಲೀ
ಮಾನವನ ಪಾಪವನೂ ತೊಳೆವ ಕಲ್ಪವಲ್ಲೀ
ಮಾನವನಾ ಪಾಪವನೂ ತೊಳೆವ ಕಲ್ಪವಲ್ಲೀ
ದೇವ ವಿರೂಪಾಕ್ಷಾ ಈವ ನಮಗೆ ರಕ್ಷಾ
ದೀವಿಗೆ ತಾ ನೀಡುವನೂ ಧರ್ಮದ ದೀಕ್ಷಾ
ದೀವಿಗೆ ತಾ ನೀಡುವನೂ ಧರ್ಮದ ದೀಕ್ಷಾ
ಕಡಿದು ಸುತ್ತಮುತ್ತಲಿದ್ದ ಗೊಂಡಾರಣ್ಯಾ
ಸ್ಥಾಪಿಸಿದನು ವಿಜಯನಗರ ವಿದ್ಯಾರಣ್ಯಾ
ಹಕ್ಕಬುಕ್ಕರಾಳಿ ಭವ್ಯತೆಯನು ತಾಳೀ
ದಿಕ್ಕು ದಿಕ್ಕು ಶಾಂತಿ ಸುಖದ ಕಹಳೆಯು ಕೇಳೀ
**** **** **** ****
Sunday, February 18, 2007
ಮಹಾ ಶಿವರಾತ್ರಿ.
ಕಕ್ಕಸ ರಕ್ಕಸರುಕ್ಕು ತಗ್ಗಿಸಿದಂಗೆ ದಕ್ಷನ ಶಿಕ್ಷಿಸಿ ಕೀರ್ತಿ ಪಡೆದವಗೆ
ಯಕ್ಷ ಪತಿಯ ಸಖನೆನಿಪ ಕೈಲಾಸದ ಮುಕ್ಕಣ್ಣಗಾನು ಕೈಮುಗಿವೇನು
ಮುಖ್ಯ ಮನಸ್ತತ್ವಕಭಿಮಾನಿಯಾದೆ ನೀನು ದುಷ್ಕರ್ಮತತಿ ನಿನ್ನ ಕೃಪೆಯಿಂದ ನೀಗುವೆನು
ಶುಷ್ಕವಾದಿಗಳ ಕಂಡಲ್ಲಿ ನಗುವೆನು ಭಕ್ತಿಪಥ ಹಿತವೆಂದು ಬಾಗುವೆನು
ನೀ ನಿತ್ತ ಜ್ಞಾನದಿಂದ ಮುಕ್ತಿಗೆ ಪೋಗುವೆನು
***********************************************************
ಧವಳ ಗಂಗೆಯ ಗಂಗಾಧರ ಮಹಲಿಂಗ
ಚನ್ನ ಪ್ರಸನ್ನ ಶ್ರೀ ಹಯವದನನ್ನ
Wednesday, February 14, 2007
ಪ್ರೇಮಿಗಳ ದಿನಾಚರಣೆ.
'ವಾಲೆಂಟೈನ್ಸ್ ಡೇ' ಹಿಂದಿರುವ ಚರಿತ್ರೆ.
ಹಿಂದೆ ರೋಮ್ ನಲ್ಲಿ ಕ್ಲಾಡಿಯಸ್ ಎಂಬ ರಾಜನು ತನ್ನ ಪ್ರಜೆಗಳನ್ನು ಯುದ್ದಕ್ಕೆ ಸೇರುವಂತೆ ಪೀಡಿಸುತ್ತಿದ್ದನಂತೆ ಆದರೆ ಇವನ ಈ ಹುಚ್ಚಿನಿಂದ ಬೇಸತ್ತ ಜನ ತಲೆಮರೆಸಿಕೊಳ್ಳುತ್ತಿದ್ದರಂತೆ. ಇದರಿಂದ ಕೋಪಗೊಂಡ ರಾಜ ಅವರುಗಳು ಮದುವೆಯಾಗದಂತೆ ತಡೆಯೊಡ್ಡಿದ್ದನು.
ಅದೇ ಸಂದರ್ಭದಲ್ಲಿ ವಾಲೆಂಟೈನ್ ಎಂಬುವನೊಬ್ಬನು ಈ ಪ್ರೇಮಿಗಳನ್ನು ಒಂದುಗೂಡಿಸಲು ಗುಪ್ತ ಮದುವೆಗಳನ್ನು ಮಾಡಿಸುತ್ತಿದ್ದ. ಇದನ್ನು ತಿಳಿದ ರಾಜನು ಆ 'ವಾಲೆಂಟೈನ್' ನನ್ನು ಆಜೀವ ಪರ್ಯಂತ ಸೆರೆಯಲ್ಲಿಟ್ಟನು. ಆಗ ಅವನ ಈ ಕಾರ್ಯವನ್ನು ಮುಂದುವರೆಸಿಕೊಂಡು ಹೋದವಳು ಅಲ್ಲಿಯ ಕಾವಲುಗಾರನ ಮಗಳು, ಅವಳು ದಿನಾ ಬಂದು ಇವನನ್ನ ಭೇಟಿಯಾಗುತ್ತಿದ್ದಳು.
ಪೆಬ್ರವರಿ 14 ರಂದು ಅವನು ಕೊನೆಯುಸಿರೆಳೆದನು, ಸಾಯುವ ಮುನ್ನ ಅವಳಿಗೆ ಒಂದು ಪ್ರೇಮ ಪತ್ರವನ್ನು ಬರೆದು ಅದರ ಕೊನೆಯಲ್ಲಿ love from your Valentine ಅಂತ ಬರೆದಿದ್ದನಂತೆ.
ಅದರಂತೆ ಜನ ಆ ದಿನವನ್ನ 'ವಾಲೆಂಟೈನ್ ಡೇ' ಅಥವಾ 'ಪ್ರೇಮಿಗಳ ದಿನಾಚರಣೆ' ಎಂದು ಆಚರಣೆಗೆ ತಂದರು ಅನ್ನೋದು ಕಥೆ.
{ನಿನ್ನೆ ಯಾವುದೋ ಪತ್ರಿಕೆಯಲ್ಲಿ ಓದುತ್ತಿದ್ದೆ. ಅಮೇರಿಕದಲ್ಲಿ ಪ್ರೇಮಿಗಳ ದಿನಾಚರಣೆ ಯನ್ನು ಪ್ರೇಮಿಯ ಜೊತೆ ಆಚರಿಸುವುದಿಲ್ಲ ಆ ದಿವಸ ಮನೆಯವರೊಂದಿಗೆ ಕಳೆಯುತ್ತೇವೆ ಅಂತ ಹೇಳಿದ್ದಾರೆ. ಪ್ರೇಮಕ್ಕೆ ಇಂಥಾ ಮುಕ್ತವಾತಾವರಣ ಇದ್ದೂ ಇವರುಗಳಿಗೆ ಈ ಆಚರಣೆ ಬೇಸರ ತಂದಿದೆಯೇ? ತಿಳಿಯದಾಗಿದೆ}. ಇಂಥಾ ಒಂದು ಆಚರಣೆ ಇದೆ ಎಂದು ನನಗೆ ತಿಳಿದದ್ದೇ ಈ ಅಮೇರಿಕಾ ದೇಶಕ್ಕೆ ಬಂದ ಮೇಲೆ. ಈಗಂತೂ ಭಾರತದಲ್ಲಿ ಇದು ಬಹಳೇ ಹಳೇ ಆಚರಣೆ ಅನ್ನುವಂತಾಗಿದೆ.
ಒಟ್ಟಿನಲ್ಲ್ಲಿ ಇಡೀ ಪ್ರಪಂಚವೇ ಪ್ರೇಮಿಗಳ ಆಚರಣೆಯನ್ನು ಶ್ರದ್ದಾ ಭಕ್ತಿಗಳಿಂದ ಆಚರಿಸುತ್ತಿದೆ.
ಪ್ರೇಮವೆಂದರೆ ದೇವರು, ಪ್ರೇಮವೊಂದು ಅಗೋಚರವಾದ ಶಕ್ತಿ, ಪ್ರೇಮ ದೈವೀಕವಾದದ್ದು ಇದು ನನ್ನ ಒಂದು ಭಾವನೆ. ಅದೇನೇ ಇರಲಿ ಈ ಪ್ರೇಮಿಗಳ ದಿನಾಚರಣೆಗೆ ನನ್ನದೊಂದು ಕಾಣಿಕೆ....
ಚಿತ್ರ: ಗೆಜ್ಜೆಪೂಜೆ (1970)
ಸಂಗೀತ: ವಿಜಯಭಾಸ್ಕರ್
ಸಾಹಿತ್ಯ: ವಿಜಯನಾರಸಿಂಹ
ಗಾಯಕರು: ಪಿ.ಬಿ.ಶ್ರೀನಿವಾಸ್ , ಎಸ್.ಜಾನಕಿ.
ಪಂಚಮವೇದಾ ಪ್ರೇಮದನಾದಾ
ಪ್ರಣಯದ ಸರಿಗಮ ಭಾವಾನಂದಾ
ಹೃದಯ ಸಂಗಮ ಅನುರಾಗ ಬಂಧಾ
ರಾಗರಾಗಿಣಿ ಯೋಗಾನು ಬಂಧಾ ...ಪಂಚಮ ವೇದಾ....
ಜೀವಜೀವದ ಸ್ವರಸಂಚಾರಾ
ಅಮೃತ ಚೇತನ ರಸಧಾರಾ
ರಾಧಾಮಾಧವ ವೇಣುವಿಹಾರಾ
ಪ್ರೀತಿಯೆ ಗೀತೆಯ ಜೀವನಸಾರಾ ...ಪಂಚಮವೇದಾ..
ಪ್ರೇಮಗಾನದಿ ಪರವಶವೀಧರೆ
ಮಾನಸಲೋಕದ ಗಂಗೆಯಧಾರೆ
ದಿವ್ಯದಿಗಂತದ ಭಾಗ್ಯತಾರೆ
ಭವ್ಯ ರಸಿಕತೆ ಬಾಳಿನಾಸರೆ ...ಪಂಚಮವೇದಾ...
*** *** ***