Sunday, February 18, 2007

ಮಹಾ ಶಿವರಾತ್ರಿ.




ಮಹಾ ಶಿವರಾತ್ರಿ ಹಬ್ಬದಲ್ಲಿ ಪ್ರಳಯಕಾಲಕನಾದ ಪರಶಿವನನ್ನು ಅನನ್ಯ ಶ್ರದ್ಧಾ ಮತ್ತು ಭಕ್ತಿಯಿಂದ ಪೂಜಿಸಲಾಗುತ್ತದೆ. ಆ ದಿನದಂದು ಶಿವನಿಗೆ ಅತ್ಯಂತ ಇಷ್ಟವಾದ ಬಿಲ್ವಪತ್ರೆಯನ್ನು ಅರ್ಪಿಸಿ , ಉಪವಾಸವನ್ನೂ ಆಚರಿಸುತ್ತಾರೆ. ಆ ದಿನದಂದು ಜಾಗರಣೆಯನ್ನು ಮಾಡಿ ಶಿವಜಪ, ಭಜನೆಗಳನ್ನು ಮಾಡುತ್ತಾ ಆ ಪರಶಿವನ ಕೃಪೆಗೆ ಪಾತ್ರರಾಗುತ್ತಾರೆ. ಮಾಘಮಾಸದ ಚತುರ್ದಶಿಯಂದು ಬರುವ ಈ ಮಹಾಶಿವರಾತ್ರಿ ಸಮಸ್ತರಿಗೂ ಸನ್ಮಂಗಳವನ್ನು ಉಂಟುಮಾಡಲಿ.

ಯತಿ ಶ್ರೀ ವಾದಿರಾಜರು ಬರೆದಂತಹ ಶಿವಸ್ತೋತ್ರ :

ಕಕ್ಕಸ ರಕ್ಕಸರುಕ್ಕು ತಗ್ಗಿಸಿದಂಗೆ ದಕ್ಷನ ಶಿಕ್ಷಿಸಿ ಕೀರ್ತಿ ಪಡೆದವಗೆ
ಯಕ್ಷ ಪತಿಯ ಸಖನೆನಿಪ ಕೈಲಾಸದ ಮುಕ್ಕಣ್ಣಗಾನು ಕೈಮುಗಿವೇನು
ಮುಖ್ಯ ಮನಸ್ತತ್ವಕಭಿಮಾನಿಯಾದೆ ನೀನು ದುಷ್ಕರ್ಮತತಿ ನಿನ್ನ ಕೃಪೆಯಿಂದ ನೀಗುವೆನು
ಶುಷ್ಕವಾದಿಗಳ ಕಂಡಲ್ಲಿ ನಗುವೆನು ಭಕ್ತಿಪಥ ಹಿತವೆಂದು ಬಾಗುವೆನು
ನೀ ನಿತ್ತ ಜ್ಞಾನದಿಂದ ಮುಕ್ತಿಗೆ ಪೋಗುವೆನು

***********************************************************
ರುದ್ರದೇವರನ್ನು ಕುರಿತು ಯತಿ ವಾದಿರಾಜರು ರಚಿಸಿರುವ ಕೃತಿ:

ಧವಳ ಗಂಗೆಯ ಗಂಗಾಧರ ಮಹಲಿಂಗ
ಮಾಧವನ ತೋರಿಸಯ್ಯ ಗುರುಕುಲೋತ್ತುಂಗಾ

ಅರ್ಚಿಸಿದವರಿಗಭೀಷ್ಟೆಯ ಕೊಡುವಾ
ಹೆಚ್ಚಿನ ಅಘಗಳ ತರಿದು ಬಿಸಾಡುವಾ
ದುಷ್ಚರಿತಗಳೆಲ್ಲಾ ದೂರದಲ್ಲಿಡುವಾ, ನ-
ಮ್ಮಚುತಗಲ್ಲದ ಅಸುರರ ಬಡಿವಾ

ಮಾರನ್ನ ಗೆದ್ದ ಮನೋಹರ ಮೂರ್ತಿ
ಸಾರ ಸಜ್ಜನರಿಗೆ ಶುಭ ಚಕ್ರವರ್ತಿ
ಧಾರುಣಿಯೊಳಗೆ ತುಂಬಿದೆ ನಿನ್ನ ಕೀರ್ತಿ
ಮುರಾರಿಯ ತೋರಿಸಯ್ಯಾ ನಿನಗೆ ಶರಣಾರ್ತಿ

ಚನ್ನ ಪ್ರಸನ್ನ ಶ್ರೀ ಹಯವದನನ್ನ
ಅನುದಿನ ನೆನೆವಂತೆ ಮಾಡೋ ನೀ ಎನ್ನಾ
ಅನ್ಯನಲ್ಲವೋ ನಾ ಗುರುವೆಂಬೆ ನಿನ್ನಾ
ಇನ್ನಾದರೂ ತೋರೋ ಹರಿಯ ಮುಕ್ಕಣ್ಣಾ
* ** ** * ** * * ** * * * * * * * * *

1 comment:

sritri said...

ಓಂ ನಮ: ಶಿವಾಯ!

"ಧವಳ ಗಂಗೆಯ ಗಂಗಾಧರ" - ಈ ಹಾಡು ನನಗೆ ತುಂಬಾ ಇಷ್ಟ. ಶಿವರಾತ್ರಿಯ ಸಂದರ್ಭಕ್ಕೆ ಈ ಹಾಡನ್ನು ಇಲ್ಲಿರಿಸಿರುವುದು ಸಮಯೋಚಿತವಾಗಿದೆ.

ಖಜಾನೆ ಮತ್ತಷ್ಟು ಅಮೂಲ್ಯ ಗೀತೆಗಳ ಆಗರವಾಗಲಿ ಎಂದು ಹಾರೈಸುವೆ.