Wednesday, April 11, 2007

ನಮ್ಮಣ್ಣ ಮತ್ತು ನಮ್ಮಣ್ಣಾವ್ರು

ನಾನು ಚಿಕ್ಕವಳಾಗಿದ್ದಾಗಿನಿಂದ ಕಂಡ ಸಿನೆಮಾ ಹೀರೋ ಅಂದರೆ ಅದು ಕನ್ನಡದ ರಾಜ್ ಕುಮಾರ್ ಒಬ್ಬರೇ. ಅವರ ಸಿನೆಮಾಗಳಿಗೆ ಮಾತ್ರ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದುದು. ಆಗ ಈಗಿನಂತೆ ಕನ್ನಡ ಚಿತ್ರಗಳು ಏಕಕಾಲಕ್ಕೆ ಎಲ್ಲಾ ಚಿತ್ರಮಂದಿರಗಳಲ್ಲೂ ಬಿಡುಗಡೆಯಾಗುತ್ತಿರಲಿಲ್ಲ. ಬೆಂಗಳೂರು, ಹುಬ್ಬಳ್ಳಿ ಅಂತಹ ದೊಡ್ಡ ದೊಡ್ಡ ಊರಲ್ಲಿ ಮಾತ್ರ ಹೊಸ ಚಿತ್ರಗಳು ಬಿಡುಗಡೆಯಾಗುತ್ತಿತ್ತು. ನಮ್ಮ ಊರಲ್ಲಿ ಬರುವ ಹೊತ್ತಿಗೆ ಅದು ಬೇರೆ ಊರಿನವರಿಗೆ ಹಳತಾಗಿರುತ್ತಿತ್ತು. ನನಗಿನ್ನೂ ನೆನಪಿದೆ ರಾಜ್ ಚಿತ್ರಗಳು ಬಿಡುಗಡೆಗೆ ಮುನ್ನವೇ ಊರಿನಲ್ಲಿರುವ ಸ್ಕೂಲು, ಹೋಟೇಲ್ ಮತ್ತು ಮೂರುರಸ್ತೆ ಸೇರುವ ಕಡೆ ರಾಜ್ ಚಿತ್ರದ ದೊಡ್ಡ ದೊಡ್ಡ ಬ್ಯಾನರ್ ಗಳು ಎಲ್ಲೆಲ್ಲೂ ರಾರಾಜಿಸಿರುತ್ತಿತ್ತು. ಊರ ಮಕ್ಕಳಿಂದ ಹಿಡಿದು ದೊಡ್ಡವರೂ ಕೂಡ ಉತ್ಸಾಹಿತರಾಗಿರುತ್ತಿದ್ದರು. ಊರಲ್ಲಿ ಒಂದು ಥರ ಹಬ್ಬದ ವಾತಾವರಣ ಇರುತ್ತಿತ್ತು.

ಚಿತ್ರ ಬಿಡುಗಡೆಗೆ ಮುನ್ನವೇ ಶುರು ನಮ್ಮ ಮನೆಯಲ್ಲಿ ನನ್ನ ಮತ್ತು ನನ್ನ ತಮ್ಮನ ರಾಗ, ನಮ್ಮ ತಂದೆಗೆ ವರಾತ ಹಚ್ಚುತ್ತಿದ್ದೆವು. 'ಅಣ್ಣ ರಾಜ್ ಕುಮಾರ್ ಸಿನಮಾ ಬರ್ತಿದೆ ನಮ್ಮನ್ನ ಯಾವಾಗ ಕರ್ಕೊಂಡು ಹೋಗ್ತೀಯಾ' ಅಂತ. ನಮ್ಮ ತಂದೆ ಮನಸ್ಸು ಮಾಡಿದ್ರೆ ಮೊದಲನೇ ಶೋಗೇ ಕರೆದುಕೊಂಡು ಹೋಗಬಹುದಿತ್ತು ಯಾಕೇಂದ್ರೆ ಆ ಥಿಯೇಟರ್ ಮಾನೇಜರ್ ನಮ್ಮ ತಂದೆಗೆ ಒಳ್ಳೆಯ ಸ್ನೇಹಿತರು, ಆದರೆ ಅಣ್ಣ ಅದಕ್ಕೆ ಒಪ್ಪುತ್ತಲೇ ಇರಲಿಲ್ಲ. ನನ್ನ ಕೆಲವು ಸ್ನೇಹಿತರು ಮೊದಲ ಆಟಕ್ಕೆ ಹೋಗುತ್ತಿದ್ದರು, ಅಲ್ಲಿಂದ ಶುರು ಸ್ಕೂಲ್ ಗೆ ಹೋಗೋವಾಗ ಬರೋವಾಗೆಲ್ಲಾ ಆ ಚಿತ್ರದ ಕಥೆ ಹೇಳೋಕ್ಕೆ ಶುರು. ನಾನು ಬೇಡ್ರೆ ನಂಗೆ ಈಗ್ಲೇ ಕಥೆ ಹೇಳ್ಬೇಡಿ ಆಮೇಲೆ ನಂಗೆ ಸಿನೆಮಾ ನೋಡೋದ್ರಲ್ಲಿ ಏನೂ ಮಜಾ ಇರಲ್ಲ ಅಂತ ಬಡ್ಕೊಂಡ್ರು 'ಒಂದ್ಸಲ ರಾಜ್ ಕುಮಾರ್ ಏನು ಮಾಡ್ತಾನೆ ಗೊತ್ತಾ' ಅಂತ ಅಲ್ಲೊಂಚೂರು ಇಲ್ಲೊಂಚೂರು ಹೇಳೇಬಿಟ್ಟಿರೋರು.

ಇದರಿಂದ ರಾಜ್ ಚಿತ್ರಗಳು ಬಂದಾಗಲೆಲ್ಲಾ ನಮ್ಮ ಮನೆ ಕುರುಕ್ಷೇತ್ರ ಆಗಿರ್ತಿತ್ತು. ಯಾಕೇಂದ್ರೆ ಚಿತ್ರ ಬಂದು ಊರಲ್ಲಿರೋರೆಲ್ಲಾ ನೋಡಿ ಮಧ್ಯ ಮಧ್ಯ ಸನ್ನಿವೇಶಗಳೆಲ್ಲಾ ಡಗ್ ಡಗ್ ಅಂತ ಎಗರಿಹೋಗೋಷ್ಟು ಹಳೇದಾಗ್ತಾ ಬಂದಿದ್ರೂ ನಮ್ಮಣ್ಣ ನಮ್ಮನ್ನ ಆ ಚಿತ್ರಕ್ಕೆ ಕರೆದುಕೊಂಡು ಹೋಗಕ್ಕೆ ಮನಸ್ಸು ಮಾಡ್ತಿರಲಿಲ್ಲ. ದಿನಕ್ಕೊಂದು ನೆಪ ಹೇಳ್ತಿದ್ದಿದಿದ್ದು ನನಗೆ ಇನ್ನೂ ಹಸಿರು. ಬಿಡುಗಡೆಯಾದ ತಕ್ಷಣ ಸಿನೆಮಾಗೆ ಹೋದರೆ ಬರೀ ವಿಷಲ್ ಹೊಡೀತಿರ್ತಾರೆ, ಕಿರಿಚಾಟ, ಒಂದೂ ಮಾತು ಕೇಳಲ್ಲ ಅನ್ನೋದೊಂದು ಅವರು ನಮ್ಮನ್ನು ಮುಂಚೆ ಕರೆದುಕೊಂಡು ಹೋಗದ್ದಕ್ಕೆ ಕೊಡುತ್ತಿದ್ದ ಕಾರಣ. ಅಮ್ಮ, ಅಣ್ಣ ಮಾಡೋದು ನೋಡಿ ಕೊನೆಗೆ 'ಕರ್ಕೋಂಡು ಹೋಗ್ಬಾರ್ದಾ ಮಕ್ಕಳನ್ನ ನೀವಂತೂ ಅತೀ ಮಾಡ್ತೀರ' ಅಂತ ಹುಸಿಮುನಿಸಿನಿಂದ ಬೈಯ್ಯೋಳು . ಆಗ ನಮಗೆ ಇನ್ನೂ ದು:ಖ ಉಕ್ಕಿ 'ಎಲ್ರೂ ಎಷ್ಟು ಮುಂಚೆನೇ ಸಿನೆಮಾ ನೋಡಿರ್ತಾರೆ ನಾವು ಚಿತ್ರ ಎತ್ತಂಗಡಿ ಆಗೋ ಕಾಲ ಬಂದ್ರೂ ಇನ್ನೂ ನೋಡಿಲ್ಲ' ಅಂತ ಗೋಳಾಡ್ತಾ ಇದ್ವಿ. ಅದಕ್ಕೆ ಅಣ್ಣ 'ನಾನೇನೂ ಕರ್ಕೊಂಡು ಹೋಗಲ್ಲ ಅಂತ ಅಂದಿದ್ದೀನಾ, ಸಲ್ಪ ನಿಧಾನವಾಗಿ ಹೋದ್ರಾಯ್ತು ಅಂತ' ಅನ್ನೋದ್ರೊಳಗೆ ನಾನು 'ಹೋಗಣ್ಣ ನಮ್ಮನ್ನ ನೀನು ಬೇಗ ಕರ್ಕೋಂಡು ಹೋಗಲ್ಲ , ನನ್ನ ಸ್ನೇಹಿತರೆಲ್ಲಾ ಮೊದಲೇ ನೋಡಿ ನನಗೆ ಎಲ್ಲಾ ಕಥೆನೂ ಹೇಳೇ ಬಿಟ್ಟಿರುತ್ತಾರೆ ನಂಗೆ ನೋಡಕ್ಕೆ ಏನೂ ಉಳಿದಿರೋದಿಲ್ಲ' ಅಂತ ಅಳ್ತಾ ಇರ್ತಿದ್ದೆ. ಆಗ ಅಣ್ಣ ಅದಕ್ಕೂ ಬಿಡ್ತಿರಲಿಲ್ಲ 'ಎಲ್ಲಾ ಕಥೆನೂ ಹೇಳಿಬಿಟ್ಟಿದ್ದಾರಾ? ಹೋಗ್ಲಿ ಬಿಡು ಇನ್ನು ಸಿನೆಮಾ ನೋಡೋದಕ್ಕೆ ಏನಿದೆ? ಹೋಗ್ದೇ ಇದ್ರೆ ದುಡ್ಡಾದ್ರೂ ಮಿಗತ್ತೆ' ಅಂತ ಮತ್ತೊಂದು ತಗಾದೆ ತೆಗೆಯೋರು. ಒಟ್ಟಿನಲ್ಲಿ ರಾಜ್ ಚಿತ್ರಗಳು ಬಂದರೆ ನಮ್ಮ ಮನೆಯಲ್ಲಿ ಒಂಥರಾ ಯುದ್ದದ ವಾತಾವರಣ ಇರುತ್ತಿತ್ತು.


ಅದಕ್ಕೆ ತಕ್ಕಂತೆ ಆ ಥಿಯೇಟರ್ ಮಾನೇಜರ್, ನಮ್ಮ ತಂದೆಯ ಶಿಷ್ಯನ ಕೈಲಿ ಹೇಳಿ ಕಳಿಸುತ್ತಿದ್ದರು. 'ಕೃಷ್ಣಮೂರ್ತಿಗೆ ಹೇಳು ಇವತ್ತು ರಾಜ್ ಕುಮಾರ್ ಚಿತ್ರದ ಕೊನೇ ದಿನ, ಬರೋದಾದರೆ 4 ಟಿಕೇಟ್ ಕಳಿಸುತ್ತೇನೆ' ಅಂತ, ಆಗ ನಮ್ಮ ತಂದೆ ಸರಿ ಅಂತ ಹೇಳಿಕಳಿಸುತ್ತಿದ್ದರು ಅಂತ ಕಾಣತ್ತೆ. ಆವತ್ತು ಸಂಜೆ ಬೇಗ ಮನೆಗೆ ಬಂದು ಬೇಗ ಊಟ ಮಾಡೋಣ ಅಂದರೆ ನಮಗೆ ಒಳಗೊಳಗೇ ಖುಷಿ. ಇವತ್ತು ಸಿನೆಮಾಗೆ ಹೋಗೋದು ಗ್ಯಾರಂಟಿ ಅಂತ. ಈ ರೀತಿ ನಮ್ಮ ತಂದೆ ನಮ್ಮನ್ನ ಗೋಳುಗುಟ್ಟಿಸಿ ನಮ್ಮನ್ನು ರಾಜ್ ಚಿತ್ರಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಊರೋರೆಲ್ಲಾ ನೋಡಿ ಬಿಟ್ಟ ಚಿತ್ರವನ್ನು ನಾವು ಕೊನೇಯಲ್ಲಿ ನೋಡಿ ಬಂದರೂ ನಾವೂ ಏನೋ ಸಾಧನೆ ಮಾಡಿದ್ದೇವೆ ಅನ್ನೋ ಹೆಮ್ಮೆ ಇರುತ್ತಿತ್ತು.

ಏನೇ ಆದರೂ ಸ್ನೇಹಿತರ ಜೊತೆಗೆ ಮಾತ್ರಾ ನಮ್ಮನ್ನು ರಾಜ್ ಚಿತ್ರಗಳಿಗೆ ಕಳಿಸುತ್ತಿರಲಿಲ್ಲ, ಅಲ್ಲಿ ಯಾವಾಗಲೂ ದೊಂಬಿ, ಗಲಾಟೆ , ಹೆಣ್ಣುಮಕ್ಕಳು ಹಾಗೆಲ್ಲಾ ಹೋಗಬಾರದು ಅನ್ನೋದು ಅವರ ಒಂದು ವಾದ. ನಾನು ಸ್ಕೂಲ್, ಕಾಲೇಜ್ ನಲ್ಲಿ ಓದೋವಾಗ ಒಂದು ದಿನವೂ ಸ್ನೇಹಿತರ ಜೊತೆ ಸಿನೆಮಾಗೆ ಹೋದ ನೆನಪೇ ಇಲ್ಲ. ಬೆಂಗಳೂರಿಗೆ ಬಂದ ಮೇಲೂ ಸಹ ಅಣ್ಣನೊಂದಿಗೇ ರಾಜ್ ಚಿತ್ರಗಳ ವೀಕ್ಷಣೆ. ಪ್ರತಿ ಚಿತ್ರದಲ್ಲೂ ಅಣ್ಣ ರಾಜ್ ಕುಮಾರ್ ಬಟ್ಟೆಯಿಂದಾ ಹಿಡಿದು, ಹಾಡುಗಳವರೆಗೂ ಆಕ್ಷೇಪಿಸುತ್ತಾ ನಮ್ಮನ್ನು ನಗಿಸುತ್ತಿದ್ದರು. ರಾಜ್ ಬಟ್ಟೆ ವಿಷಯಕ್ಕೆ ಬಂದರೆ ಎಷ್ಟೋ ಚಿತ್ರಗಳಲ್ಲಿ ರಾಜ್ ತುಂಬಾ ತೆಳುವಾದ ಮೇಲಂಗಿಯನ್ನು ಧರಿಸುತ್ತಿದ್ದರು ಆಗ ಅಣ್ಣ 'ಇದು ಪಾರ್ವತಮ್ಮನ ಸೀರೆ ಹರಿದು ಹೊಲೆಸಿರೋದು' ಅಂತ ಅನ್ನೋರು, ಹಾಡಿನ ವಿಷಯ ಬಂದಾಗ 'ಕಣ್ಣಲ್ಲಿ ತುಂಬಿ ಚಲುವ ಎದೆಯಲ್ಲಿ ತುಂಬಿ ಒಲವಾ ಬಾಳಲ್ಲಿ ತುಂಬಿದೇ ಉಲ್ಲಾಸವಾ' ಅನ್ನೋದನ್ನ 'ಬಾಯಲ್ಲಿ ತುಂಬಿದೇ ಹಲ್ವಾ' ಅಂತ ಹಾಡೋರು. ಆಗ ನಮಗೆ ಸಿಟ್ಟು ಬರೋದು ಸುಮ್ನಿರಣ್ಣ ಯಾವಾಗಲೂ ನಿನಗೆ ಇದೇ ಕೆಲ್ಸ ಅಂತ ಬೈತಿದ್ವಿ.

ನನಗೆ ನೆನಪಿದ್ದಂತೆ ನಾವೆಲ್ಲಾ ಒಟ್ಟಿಗೆ ನೋಡಿದ ರಾಜ್ ಚಿತ್ರ ಅಂದ್ರೆ 'ಜೀವನ ಚೈತ್ರ', ಅದೇ ಕೊನೆ ಮತ್ತೆ ರಾಜ್ ಹೊಸ ಚಿತ್ರಗಳನ್ನು ನಾವುಗಳು ಒಟ್ಟಿಗೆ ನೋಡಲೇ ಇಲ್ಲ. ಅದಕ್ಕೆ ತಕ್ಕಂತೆ ನಾನು ದೇಶವೇ ಬಿಟ್ಟೆ. ನಮ್ಮ ಅಣ್ಣ ಈಗ ನಮ್ಮೊಂದಿಗೆ ಇಲ್ಲ . ಅದೇ ಥರ ಕನ್ನಡದ ಎಲ್ಲರ ಕಣ್ಮಣಿ ಎಂದೇ ಹೆಸರಾಗಿದ್ದ ರಾಜ್ ಕುಮಾರ್ ಕೂಡ ಇಲ್ಲ. ಆದರೂ ರಾಜ್ ನೋಡಿದಾಗ ನನಗೆ ಇದೆಲ್ಲಾ ತುಂಬಾ ನೆನಪಾಗುತ್ತದೆ. ನಮ್ಮ ಅಣ್ಣ ರಾಜ್ ಕುಮಾರ್ ರವರನ್ನು ಎಷ್ಟೇ ಅಣಕಿಸಿದರೂ ರಾಜ್ ಹಾಡುಗಳೆಂದರೆ ಅಚ್ಚುಮೆಚ್ಚು ಅದರಲ್ಲೂ 'ಎರಡು ನಕ್ಷತ್ರಗಳು' ಚಿತ್ರದ 'ಗೆಳತೀ ಬಾರದೂ ಇಂಥಾ ಸಮಯಾ ಅನುರಾಗ ಬೇಕೆಂದಿದೇ ವಿರಹಾ' ಹಾಡನ್ನು ಬಹಳ ಆಸೆಯಿಂದ ಕೇಳುತ್ತಿದ್ದರು. ಅದೇ ಥರ ಬಹು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಅಣ್ಣಾವ್ರ ಚಿತ್ರಕ್ಕೆ ಕರೆದುಕೊಂಡು ಹೋಗದೆ ಗೋಳು ಗುಟ್ಟಿಸುತ್ತಿದ್ದ ಅಣ್ಣ, ನಾನಿರುವುದೆ ನಿಮಗಾಗಿ ಎಂದು ಹಾಡುತ್ತಿದ್ದ ಅಣ್ಣಾವ್ರು ಇಬ್ಬರೂ ಇಲ್ಲ. ಈಗ ಉಳಿದಿರುವುದು ಆ ಹಳೆಯ ನೆನಪಿನ ಪಳೆಯುಳಿಕೆಗಳು ಮಾತ್ರಾ.

ಇಂದಿಗೆ ರಾಜ್ ಕುಮಾರ್ ಅವರು ನಮ್ಮೆಲ್ಲರನ್ನು ಅಗಲಿ ಒಂದು ವರ್ಷವಾಯಿತು. ಅವರನ್ನು ಈ ರೀತಿಯಾಗಿ ನೆನಪು ಮಾಡಿಕೊಂಡಿದ್ದೇನೆ. ನಮ್ಮ ಅಣ್ಣ ಮತ್ತು ನಮ್ಮೆಲ್ಲರ ಅಚ್ಚುಮೆಚ್ಚಿನ ಅಣ್ಣಾವ್ರು ಇಬ್ಬರ ನೆನಪೂ ಹೃದಯದಲ್ಲಿ ಶಾಶ್ವತ.

No comments: