
ಅಯ್ಯೋ ಮತ್ತೆ ಬಂತಲ್ಲಪ್ಪ ಈ ಬೇಸಿಗೆ. ಥೂ ಸಾಕಪ್ಪಾ ಸಾಕು ಈ ಚರ್ಮ ಸುಡೋ ಬಿಸಿಲು, ಧಗೆ, ಬೆವರು. ದಿನಕ್ಕೆ ಎರೆಡೆರಡು ಸಾರಿ ಸ್ನಾನಾ ಮಾಡೋ ಪರಿಸ್ಥಿತಿ. ಇದು ನನ್ನ ಸ್ಥಿತಿಯಾದರೆ ಅಮೇರಿಕದ ಜನರ ಪರಿಯೇ ಬೇರೆ. ಅವರಿಗೆ ಈ ಬಿಸಿಲುಗಾಲ ಎಂದರೆ ಅದೇನು ಖುಷಿ. ಬೇಸಿಗೆ ಬಂತೆಂದರೆ ಸಾಕು ಮನೆ ಮಂದಿಯೆಲ್ಲಾ ಬೀದಿಯಲ್ಲೇ ಇರುತ್ತಾರೆ what a nice weather ಅಂದುಕೊಂಡು. ಆದರೆ ನನಗೆ ಮೊದಲಿನಿಂದಲೂ ಬೇಸಿಗೆ ಬಂದರೆ ದ್ವಂದ್ವ ಅನುಭವ. ಬಿಸಿಲಿನ ತಾಪದ ಭಯವೊಂದು ಕಡೆಯಾದರೆ, ಬೇಸಿಗೆ ರಜಕ್ಕೆ ಅಜ್ಜಿ ಮನೆಗೆ ಹೋಗಿ ಮಜಾ ಮಾಡುವ ಖುಷಿಯೊಂದು ಕಡೆ. ಒಟ್ಟಿನಲ್ಲಿ ಬೇಸಿಗೆಯ ಬಿಸಿಲು ಮಾತ್ರ ಬೇಡ, ಬೇಸಿಗೆ ರಜಾ ಮಾತ್ರ ಬೇಕು ಅನ್ನುವಂತಾಗಿತ್ತು.
ಅಜ್ಜಿ ಮನೆಗೆ ಹೋಗಿದ್ದೇ ತಡ ಎಲ್ಲಾ ಮಕ್ಕಳು ಸೇರಿ ಮನೆಯೇ ತಲೆ ಕೆಳಗೆ ಮಾಡುತ್ತಿದ್ದುದು ಇನ್ನೂ ಮನದಲ್ಲಿ ಹಚ್ಚಹಸಿರು. ಸದಾ ಬಿಸಿಲಿನಲ್ಲಿ ಆಡುವ ನಮ್ಮನ್ನು ನೋಡಿ ದೊಡ್ಡವರು "ಏನು ಮಕ್ಕಳಪ್ಪಾ ಇವು ಇವಕ್ಕೆ ಬಿಸಿಲು ಮೈಗೇ ಹತ್ತುವುದಿಲ್ವೋ ಏನೋ" ಅಂತ ಬೈಯ್ಯುವಾಗಲೂ ಅವರ ಮಾತಿನಲ್ಲಿದ್ದ ಕಳಕಳಿ ಗೋಚರವೇ ಆಗುತ್ತಿರಲಿಲ್ಲ ಅನ್ನಿಸತ್ತೆ. ಮಕ್ಕಳು ಬಂದಿದ್ದಾರೆಂದು ಅಜ್ಜಿ ಪ್ರೀತಿಯಿಂದ ಮಾಡಿಕೊಡುತ್ತಿದ್ದ ತಿಂಡಿಗಳು, ಹೇಳುತ್ತಿದ್ದ ಕತೆಗಳು ಈಗಲೂ ಅದೆಂತಹ ಹಿತದ ಅನುಭವವನ್ನುಕೊಡುತ್ತದೆ. ಇಷ್ಟೆಲ್ಲದರ ನಡುವೆ ಬಿಸಿಲಿಗೆ ಬೇಸರಿಸಿ ಬೈಯ್ಯುತ್ತಿದ್ದ ನನಗೆ ಬೇಸಿಗೆ ಕಳೆದದ್ದೇ ತಿಳಿಯುತ್ತಿರಲಿಲ್ಲ. ಅಜ್ಜಿ-ತಾತ, ಮಾವಾ-ಅತ್ತೆ, ದೊಡ್ಡಪ್ಪ-ದೊಡ್ಡಮ್ಮಂದಿರ ಅಕ್ಕರೆಯ ತಂಪಿನಲ್ಲಿ ಮಿಂದೇಳುತ್ತಿದ್ದ ನನಗೆ ಬಹುಷ: ಬೇಸಿಗೆ ಬಿಸಿಲು ಮರೆತೇ ಹೋಗುತ್ತಿತ್ತೋ ಏನೋ? ಇನ್ನು ಸ್ಕೂಲು, ಹೋಂವರ್ಕ್, ಕಡಿಮೆ ಅಂಕ ತೆಗೆದರೆ ಸಿಗುತ್ತಿದ್ದ ಬೈಗಳ ಯಾವುದೂ ಇಲ್ಲ. ಇದೆಲ್ಲವೂ ಬೇಸಿಗೆಯಲ್ಲಿ ತಾನೇ ಲಭ್ಯ.
ಇವತ್ತಿಗೂ ನನಗೆ ಬೇಸಿಗೆ ಅಂದರೆ ಸಾಕು ಮುಖ ಮುದುರುತ್ತದೆ. ಮೊದಲಿನಂತೆ ರಜೆ ಬಂದರೆ ಅಜ್ಜಿ ಮನೆಗೆ ಓಡಿ ಆಡುತ್ತಿದ್ದ ಕಾಲವೇ ಮುಗಿದು ಹೋಗಿದೆ. ಆದರೂ ಆ ಹಿಂದಿನ ಬೇಸಿಗೆ ಕಾಲವನ್ನು ನೆನೆಸಿಕೊಳ್ಳುವುದೆಂದರೆ ನನಗೆ ತುಂಬಾ ಮೆಚ್ಚು. ಪ್ರೀತಿಯ ಮಳೆಗರೆಯುತ್ತಿದ್ದ ಆ ಹಿರಿಯ ಜೀವಗಳು ಕಣ್ಮರೆಯಾಗಿ ಎಷ್ಟೋ ಕಾಲ ಉರುಳಿದ್ದರೂ ಆ ಬೇಸಿಗೆ ರಜಾ ದಿನಗಳು ಈಗಲೂ ಕಾಡುತ್ತದೆ.
ಈಗ ಬರೀ ಬಿಸಿಲನ್ನು ಬೈದುಕೊಳ್ಳುತ್ತಾ ಯಾವಾಗ ಈ ಬೇಸಿಗೆ ಕಳೆದು ಮಳೆಗಾಲ ಶುರುವಾಗತ್ತೊ ಎಂದು ಕಾಯುವುದೇ ಕೆಲಸವಾಗಿದೆ. ಈ ದೇಶದಲ್ಲಂತೂ ಮೈಕೈಗೆ sunscreen ಅಥವಾ sunblock ಬಳಿದುಕೊಂಡು ಕಟುಬಿಸಿಲಿಗೆ ಮೈಯೊಡ್ಡಿ ಅರೆಬೆತ್ತಲೆ ಓಡಾಡುವವರನ್ನು ನೋಡಿ ನನಗ್ಯಾಕೆ ಈ ಬಿಸಿಲು ಹಿಂಸೆ ಅನ್ನಿಸುತ್ತದೆ ತಿಳಿಯದಾಗಿದೆ. ಈಗ ಇಲ್ಲಿ Daylight Saving ಅಂತೆ ರಾತ್ರಿ 9 ಗಂಟೆ ತನಕ ಕುದಿಯುವ ಬಿಸಿಲನ್ನು ಹೇಗಪ್ಪಾ ತಡೆದುಕೊಳ್ಳುವುದೂ ಅನ್ನಿಸುತ್ತಿದೆ.
ಬಾಲ್ಯದಲ್ಲಿ ನಾನು ಕಳೆದ ಈ ಮೂರೂ ಕಾಲಗಳ ನೆನಪು ನನ್ನ ಮನದಲ್ಲಿ ಅಚ್ಚಳಿಯದೆ ನಿಂತಿದೆ. ಮಳೆಗಾಲದಲ್ಲಿ ಶಾಲೆಗೆ ಹೋಗುವಾಗ Raincoat ಧರಿಸಿ ತಮ್ಮನ ಕೈ ಹಿಡಿದು ನಡೆಯುತ್ತಿದ್ದ ನೆನೆಪೊಂದಾದರೆ, ಚಳಿಗಾಲದಲ್ಲಿ ಅಮ್ಮ ಮಕ್ಕಳಿಗೆ ಚಳಿಯಾಗತ್ತೆ ಅಂತ ಸ್ವೆಟರ್ ಹಾಕಿ ಸ್ಕಾರ್ಪ್ ಕಟ್ಟಿ ಕಳಿಸುತ್ತಿದ್ದರೆ ಅಣ್ಣ ಮಕ್ಕಳಿಗೆ ತಣ್ಣೀರಿನಲ್ಲಿ ಕೈಕಾಲು ತೊಳೆದರೆ ಚಳಿಯಾಗತ್ತೆ ಅಂತ ಸದಾ ಹಂಡೆಒಲೆಗೆ ಹೊಟ್ಟು ತುಂಬಿ ಬಿಸಿನೀರು ಕಾಸಿ, ಅದೇ ಒಲೆಯಲ್ಲಿನ ಬೂದಿಕೆಂಡದಲ್ಲಿ ಹಲಸಿನಬೀಜ, ಗೆಣಸು ಸುಟ್ಟು ಕೊಡುತ್ತಿದ್ದ ನೆನಪು. ಇನ್ನು ಬೇಸಿಗೆಯಲ್ಲಿ ಅಣ್ಣ ನಮ್ಮ ಲಗ್ಗೇಜ್ ಹೊತ್ತು ತಂದು ಅಮ್ಮನನ್ನು ನಮ್ಮನ್ನು ರಜಕ್ಕೆ ಅಜ್ಜಿ ಮನೆಗೆ ಕಳಿಸಿಕೊಡುತ್ತಿದ್ದ ನೆನಪು. ಒಟ್ಟಿನಲ್ಲಿ ಮೂರು ಕಾಲವೂ ಸುಂದರ ನೆನಪುಗಳ ಆಗರ.
ಆದರೂ ಕಾಲಗಳು ಬಿಸಿಲಾದರೇನೂ ಮಳೆಯಾದರೇನೂ ಅಂತ ಒಂದನೊಂದು ಅಟ್ಟಿಸಿಕೊಂಡು ಬರುತ್ತಲೇ ಇವೆ. ಆ ಕಾಲದೋಟದಲ್ಲಿ ನಾವೂ ಎಷ್ಟೋ ಬಾರಿ ತಿರಿಗಿದ್ದಾಗಿದೆ ಇನ್ನೂ ತಿರುಗುತ್ತಲೇ ಇರುತ್ತೇವೆ. ಆದರೂ ಬೇಸಿಗೆ ಬಂದರೆ ಅದನ್ನು ಬೈಯ್ಯುವುದಂತೂ ತಪಿಲ್ಲ.
ಈ ವಿಷಯದಲ್ಲಿ ಬೇರೆಯವರ ಅಭಿಪ್ರಾಯಗಳು ಹೇಗೋ????