Monday, March 26, 2007

ಬಿಸಿಲಾದರೇನೂ


ಯ್ಯೋ ಮತ್ತೆ ಬಂತಲ್ಲಪ್ಪ ಈ ಬೇಸಿಗೆ. ಥೂ ಸಾಕಪ್ಪಾ ಸಾಕು ಈ ಚರ್ಮ ಸುಡೋ ಬಿಸಿಲು, ಧಗೆ, ಬೆವರು. ದಿನಕ್ಕೆ ಎರೆಡೆರಡು ಸಾರಿ ಸ್ನಾನಾ ಮಾಡೋ ಪರಿಸ್ಥಿತಿ. ಇದು ನನ್ನ ಸ್ಥಿತಿಯಾದರೆ ಅಮೇರಿಕದ ಜನರ ಪರಿಯೇ ಬೇರೆ. ಅವರಿಗೆ ಈ ಬಿಸಿಲುಗಾಲ ಎಂದರೆ ಅದೇನು ಖುಷಿ. ಬೇಸಿಗೆ ಬಂತೆಂದರೆ ಸಾಕು ಮನೆ ಮಂದಿಯೆಲ್ಲಾ ಬೀದಿಯಲ್ಲೇ ಇರುತ್ತಾರೆ what a nice weather ಅಂದುಕೊಂಡು. ಆದರೆ ನನಗೆ ಮೊದಲಿನಿಂದಲೂ ಬೇಸಿಗೆ ಬಂದರೆ ದ್ವಂದ್ವ ಅನುಭವ. ಬಿಸಿಲಿನ ತಾಪದ ಭಯವೊಂದು ಕಡೆಯಾದರೆ, ಬೇಸಿಗೆ ರಜಕ್ಕೆ ಅಜ್ಜಿ ಮನೆಗೆ ಹೋಗಿ ಮಜಾ ಮಾಡುವ ಖುಷಿಯೊಂದು ಕಡೆ. ಒಟ್ಟಿನಲ್ಲಿ ಬೇಸಿಗೆಯ ಬಿಸಿಲು ಮಾತ್ರ ಬೇಡ, ಬೇಸಿಗೆ ರಜಾ ಮಾತ್ರ ಬೇಕು ಅನ್ನುವಂತಾಗಿತ್ತು.

ಅಜ್ಜಿ ಮನೆಗೆ ಹೋಗಿದ್ದೇ ತಡ ಎಲ್ಲಾ ಮಕ್ಕಳು ಸೇರಿ ಮನೆಯೇ ತಲೆ ಕೆಳಗೆ ಮಾಡುತ್ತಿದ್ದುದು ಇನ್ನೂ ಮನದಲ್ಲಿ ಹಚ್ಚಹಸಿರು. ಸದಾ ಬಿಸಿಲಿನಲ್ಲಿ ಆಡುವ ನಮ್ಮನ್ನು ನೋಡಿ ದೊಡ್ಡವರು "ಏನು ಮಕ್ಕಳಪ್ಪಾ ಇವು ಇವಕ್ಕೆ ಬಿಸಿಲು ಮೈಗೇ ಹತ್ತುವುದಿಲ್ವೋ ಏನೋ" ಅಂತ ಬೈಯ್ಯುವಾಗಲೂ ಅವರ ಮಾತಿನಲ್ಲಿದ್ದ ಕಳಕಳಿ ಗೋಚರವೇ ಆಗುತ್ತಿರಲಿಲ್ಲ ಅನ್ನಿಸತ್ತೆ. ಮಕ್ಕಳು ಬಂದಿದ್ದಾರೆಂದು ಅಜ್ಜಿ ಪ್ರೀತಿಯಿಂದ ಮಾಡಿಕೊಡುತ್ತಿದ್ದ ತಿಂಡಿಗಳು, ಹೇಳುತ್ತಿದ್ದ ಕತೆಗಳು ಈಗಲೂ ಅದೆಂತಹ ಹಿತದ ಅನುಭವವನ್ನುಕೊಡುತ್ತದೆ. ಇಷ್ಟೆಲ್ಲದರ ನಡುವೆ ಬಿಸಿಲಿಗೆ ಬೇಸರಿಸಿ ಬೈಯ್ಯುತ್ತಿದ್ದ ನನಗೆ ಬೇಸಿಗೆ ಕಳೆದದ್ದೇ ತಿಳಿಯುತ್ತಿರಲಿಲ್ಲ. ಅಜ್ಜಿ-ತಾತ, ಮಾವಾ-ಅತ್ತೆ, ದೊಡ್ಡಪ್ಪ-ದೊಡ್ಡಮ್ಮಂದಿರ ಅಕ್ಕರೆಯ ತಂಪಿನಲ್ಲಿ ಮಿಂದೇಳುತ್ತಿದ್ದ ನನಗೆ ಬಹುಷ: ಬೇಸಿಗೆ ಬಿಸಿಲು ಮರೆತೇ ಹೋಗುತ್ತಿತ್ತೋ ಏನೋ? ಇನ್ನು ಸ್ಕೂಲು, ಹೋಂವರ್ಕ್, ಕಡಿಮೆ ಅಂಕ ತೆಗೆದರೆ ಸಿಗುತ್ತಿದ್ದ ಬೈಗಳ ಯಾವುದೂ ಇಲ್ಲ. ಇದೆಲ್ಲವೂ ಬೇಸಿಗೆಯಲ್ಲಿ ತಾನೇ ಲಭ್ಯ.

ಇವತ್ತಿಗೂ ನನಗೆ ಬೇಸಿಗೆ ಅಂದರೆ ಸಾಕು ಮುಖ ಮುದುರುತ್ತದೆ. ಮೊದಲಿನಂತೆ ರಜೆ ಬಂದರೆ ಅಜ್ಜಿ ಮನೆಗೆ ಓಡಿ ಆಡುತ್ತಿದ್ದ ಕಾಲವೇ ಮುಗಿದು ಹೋಗಿದೆ. ಆದರೂ ಆ ಹಿಂದಿನ ಬೇಸಿಗೆ ಕಾಲವನ್ನು ನೆನೆಸಿಕೊಳ್ಳುವುದೆಂದರೆ ನನಗೆ ತುಂಬಾ ಮೆಚ್ಚು. ಪ್ರೀತಿಯ ಮಳೆಗರೆಯುತ್ತಿದ್ದ ಆ ಹಿರಿಯ ಜೀವಗಳು ಕಣ್ಮರೆಯಾಗಿ ಎಷ್ಟೋ ಕಾಲ ಉರುಳಿದ್ದರೂ ಆ ಬೇಸಿಗೆ ರಜಾ ದಿನಗಳು ಈಗಲೂ ಕಾಡುತ್ತದೆ.

ಈಗ ಬರೀ ಬಿಸಿಲನ್ನು ಬೈದುಕೊಳ್ಳುತ್ತಾ ಯಾವಾಗ ಈ ಬೇಸಿಗೆ ಕಳೆದು ಮಳೆಗಾಲ ಶುರುವಾಗತ್ತೊ ಎಂದು ಕಾಯುವುದೇ ಕೆಲಸವಾಗಿದೆ. ಈ ದೇಶದಲ್ಲಂತೂ ಮೈಕೈಗೆ sunscreen ಅಥವಾ sunblock ಬಳಿದುಕೊಂಡು ಕಟುಬಿಸಿಲಿಗೆ ಮೈಯೊಡ್ಡಿ ಅರೆಬೆತ್ತಲೆ ಓಡಾಡುವವರನ್ನು ನೋಡಿ ನನಗ್ಯಾಕೆ ಈ ಬಿಸಿಲು ಹಿಂಸೆ ಅನ್ನಿಸುತ್ತದೆ ತಿಳಿಯದಾಗಿದೆ. ಈಗ ಇಲ್ಲಿ Daylight Saving ಅಂತೆ ರಾತ್ರಿ 9 ಗಂಟೆ ತನಕ ಕುದಿಯುವ ಬಿಸಿಲನ್ನು ಹೇಗಪ್ಪಾ ತಡೆದುಕೊಳ್ಳುವುದೂ ಅನ್ನಿಸುತ್ತಿದೆ.

ಬಾಲ್ಯದಲ್ಲಿ ನಾನು ಕಳೆದ ಈ ಮೂರೂ ಕಾಲಗಳ ನೆನಪು ನನ್ನ ಮನದಲ್ಲಿ ಅಚ್ಚಳಿಯದೆ ನಿಂತಿದೆ. ಮಳೆಗಾಲದಲ್ಲಿ ಶಾಲೆಗೆ ಹೋಗುವಾಗ Raincoat ಧರಿಸಿ ತಮ್ಮನ ಕೈ ಹಿಡಿದು ನಡೆಯುತ್ತಿದ್ದ ನೆನೆಪೊಂದಾದರೆ, ಚಳಿಗಾಲದಲ್ಲಿ ಅಮ್ಮ ಮಕ್ಕಳಿಗೆ ಚಳಿಯಾಗತ್ತೆ ಅಂತ ಸ್ವೆಟರ್ ಹಾಕಿ ಸ್ಕಾರ್ಪ್ ಕಟ್ಟಿ ಕಳಿಸುತ್ತಿದ್ದರೆ ಅಣ್ಣ ಮಕ್ಕಳಿಗೆ ತಣ್ಣೀರಿನಲ್ಲಿ ಕೈಕಾಲು ತೊಳೆದರೆ ಚಳಿಯಾಗತ್ತೆ ಅಂತ ಸದಾ ಹಂಡೆಒಲೆಗೆ ಹೊಟ್ಟು ತುಂಬಿ ಬಿಸಿನೀರು ಕಾಸಿ, ಅದೇ ಒಲೆಯಲ್ಲಿನ ಬೂದಿಕೆಂಡದಲ್ಲಿ ಹಲಸಿನಬೀಜ, ಗೆಣಸು ಸುಟ್ಟು ಕೊಡುತ್ತಿದ್ದ ನೆನಪು. ಇನ್ನು ಬೇಸಿಗೆಯಲ್ಲಿ ಅಣ್ಣ ನಮ್ಮ ಲಗ್ಗೇಜ್ ಹೊತ್ತು ತಂದು ಅಮ್ಮನನ್ನು ನಮ್ಮನ್ನು ರಜಕ್ಕೆ ಅಜ್ಜಿ ಮನೆಗೆ ಕಳಿಸಿಕೊಡುತ್ತಿದ್ದ ನೆನಪು. ಒಟ್ಟಿನಲ್ಲಿ ಮೂರು ಕಾಲವೂ ಸುಂದರ ನೆನಪುಗಳ ಆಗರ.

ಆದರೂ ಕಾಲಗಳು ಬಿಸಿಲಾದರೇನೂ ಮಳೆಯಾದರೇನೂ ಅಂತ ಒಂದನೊಂದು ಅಟ್ಟಿಸಿಕೊಂಡು ಬರುತ್ತಲೇ ಇವೆ. ಆ ಕಾಲದೋಟದಲ್ಲಿ ನಾವೂ ಎಷ್ಟೋ ಬಾರಿ ತಿರಿಗಿದ್ದಾಗಿದೆ ಇನ್ನೂ ತಿರುಗುತ್ತಲೇ ಇರುತ್ತೇವೆ. ಆದರೂ ಬೇಸಿಗೆ ಬಂದರೆ ಅದನ್ನು ಬೈಯ್ಯುವುದಂತೂ ತಪಿಲ್ಲ.

ಈ ವಿಷಯದಲ್ಲಿ ಬೇರೆಯವರ ಅಭಿಪ್ರಾಯಗಳು ಹೇಗೋ????

12 comments:

Vattam said...

"ಹಂಡೆ ಒಲೆಗೆ ಹೊಟ್ಟು, ಬೂದಿಕೆಂಡದಲ್ಲಿ ಹಲಸಿನಬೀಜ" ಒಲೆ, ಹೊಟ್ಟು, ಕೆಂಡ ಜೊತೆ ಆಡೋದು, ಆಮೇಲೆ ಬೈಸ್ಕೊಳ್ಳೊದು ಒಂಥರ ಮಜ.

ಮೀರ, ನಂಗೊಂದು ಹಾಡು ನೆನ್ಪಿಗೆ ಬರ್ತಿದೆ. ಬೇಸಿಗೆಗೆ ಸಂಬಂಧಿಸಿದ್ದಲ್ಲ. ಎಸ್. ಜೆ ಹಾಡಿರೋದು. "ಮಧುರ ಅತಿ ಮಧುರ ಈ ಪ್ರೇಮ ಗಾನವು .....". ನಿಮಗ್ ಗೊತ್ತ ?

Meera Krishnamurthy said...

ಶಾಂತಲಾ, ನೀವು ಎಲ್ಲಿಯವರು? ಅಂದ್ರೆ ನಿಮ್ಮ native place ಯಾವುದು. ನೀವು ಯಾವಾಗಲಾದ್ರೂ ಹಂಡೆ ಒಲೆಗೆ ಹಾಕಿ ಸುಟ್ಟ ಹಲಸಿನ ಬೀಜ ತಿಂದಿದ್ದುಟೋ ಹೇಗೆ?
ಇನ್ನು ನೀವು ಕೇಳಿದ ಹಾಡು ಚೆನ್ನಾಗಿ ಗೊತ್ತು. ಅದು 80ರ ದಶಕದಲ್ಲಿ ಬಂದ 'ಜೀವಕ್ಕೆ ಜೀವ' ಅನ್ನೋ ಸಿನೆಮಾದು. ನಾಗ್ ಸಹೋದರರು ಸರಿತಾ ಒಟ್ಟಿಗೆ ನಟಿಸಿದ ಚಿತ್ರ.

Vattam said...

ಮೀರ, ನಾನ್ ಕರಾವಳಿಯವ್ಳು. ಹಲ್ಸಿನ್ ಬೀಜಕಿಂತ ಹಲ್ಸಿನ್ ಕಾಯ್/ಗುಜ್ಜೆ ಇಷ್ಟ. ಸುಟ್ಟು ತಿನ್ನೊಕಲ್ಲ, ಪಲ್ಯ ಮಾಡ್ಲಿಕ್ಕೆ. ನಿಮ್ ಹತ್ರ ಬೇಕಾದಷ್ಟು ಸವಾಲ್ ಹಾಕೊದಿದೆ. ನನ್ ಮುಂದಿನ ಪ್ರಶ್ನೆ, "ಸಂಪ್ರದಾಯ" ಚಿತ್ರದಲ್ಲಿ ಎಸ್ ಜೆ ಒಂದು ಹಾಡ್ ಹಾಡ್ತಾರೆ, ಗೊತ್ತ ? ಪರ್ದೆ ಮೇಲೆ ನಟಿ ಭಾರತಿ ಹಾಡೊದು.

Meera Krishnamurthy said...

ಶಾಂತಲ, ನಿಮ್ಮ ಹಲ್ಸಿನ್ ಕಾಯ್ ಗುಜ್ಜೆ ತಿನ್ಬೇಕು ಅಂತ ತುಂಬಾ ಆಸೆ ಆಗ್ತಿದೆ. ಮಾಡಿದಾಗ ನಂಗೆ ಕಳಿಸೋದು ಮರೀಬೇಡಿ.

ನಿಮ್ಮ ಪ್ರಶ್ನೆಗೆ ಉತ್ತರ ಗ್ನಾಪಕಕ್ಕೇ ಬರ್ತಿಲ್ಲ. ಆ ಹಾಡು ಭಾರಿ ಅಪರೂಪದ್ದು, ಈ ಚಿತ್ರಕ್ಕೆ ಸಂಗೀತ ಒದಗಿಸಿದವರು ಶ್ರೀ ಮಾಸ್ಟರ್ ಹಿರಣ್ಣಯ್ಯನವರು ಅಂತ ಕೇಳಿದ್ದೀನಿ. ಭಾರತಿ ಮೇಲೆ ಚಿತ್ರೀಕರಿಸಿರೋದು ಅಂತಾನೂ ನೆನಪಿದೆ, ಆದರೆ ಹಾಡಿನ ಸಾಹಿತ್ಯ ನೆನಪಿಗೆ ಬರ್ತಿಲ್ಲ. ಕಂಡು ಹಿಡಿಯುತ್ತೇನೆ.

ನಿಮ್ಮ ಮುಂದಿನ ಸವಾಲ್??????

Vattam said...

"ಸಂಪ್ರದಾಯ" ಚಿತ್ರದ ಇನ್ನೊಂದು ಹಾಡು ನನ್ಗೆ ನೆನ್ಪಿದೆ. "ಸಂಪ್ರದಾಯ ಸಂಪ್ರದಾಯ ಸಂಪ್ರದಾಯ ಪುರೊಗಾಮಿ, ಪುರೋಹಿತರ ರಾಜಕೀಯ ....". ಇದ್ದನ್ನ್ ಹಾಡಿರೊರು ಪಿ ಬಿ ಎಸ್.

ಹಲ್ಸಿನ್ ಗುಜ್ಜೆ ಪಲ್ಯ ಕಳಿಸಿ ಕೊಡೋಣ.

ನಿಮ್ಮ ಉತ್ತ್ರ ನೋಡಿ ನನ್ಗೆ ತುಂಬ ಖುಶಿ ಆಯ್ತು. ತಟ್ ಅಂತ ಕೊಡ್ತೀರ.

Meera Krishnamurthy said...

ಶಾಂತಲಾ, ಪಿಬಿಎಸ್ ಹಾಡು ನನಗೆ ಸಲ್ಪ ನೆನಪಿದೆ. ಆದರೆ ಎಸ್.ಜಾನಕಿ ಹಾಡು ಯಾವುದು ಅಂತ ತಲೆ ಕೊರೆಯುತ್ತಿದೆ.

ನಾನು ಬೆಂಗಳೂರಿನಲ್ಲಿದ್ದಾಗ ಯಾವುದೋ ಕನ್ನಡ ಚಾನಲ್ ನಲ್ಲಿ ಒಂದು ಕಾರ್ಯಕ್ರಮ ನೋಡುತ್ತಿದ್ದೆ 'ಥಟ್ಟಂತ ಹೇಳಿ'. ಅದಕ್ಕೇ ಅದೇ ಥರ ಉತ್ತರ ಕೊಡೋ "ಸಂಪ್ರದಾಯ" ಬೆಳೆಸಿಕೊಂಡಿದ್ದೇನೆ.

ಧನ್ಯವಾದಗಳು.

Vattam said...

"ಮಧುಮಾಸ ಬಂದಿದೆ ಮಧುವೆಲ್ಲ ತಂದಿದೆ
ಹೂವೊಂದು ಏಕೊ ಏನೊ ಬಲು ನೊಂದಿದೆ
.... .... .... ...."

ಇದು ?

Meera Krishnamurthy said...

ಶಾಂತಲಾ, ನೀವು ಕೇಳ್ತಾ ಇರೋ ಗೀತೆಗಳೆಲ್ಲಾ ನನಗೂ ತುಂಬಾ ಅಚ್ಚುಮೆಚ್ಚು. 'ಮಧುಮಾಸ ಬಂದಿದೇ' ಹಾಡು ಶ್ರೀನಾಥ್ ಮತ್ತು ಮಂಜುಳಾ ಅಭಿನಯಿಸಿದ 'ಸವತಿಯ ನೆರಳು' ಅನ್ನೋ ಚಿತ್ರದ್ದು. ಸತ್ಯಂ ಸಂಗೀತ.

ಏನೂ ನೀವೂ ಕೂಡ ಎಸ್.ಜಾನಕಿ ಬೀಸಣಿಗೇನಾ????

Vattam said...

ನೀವ್ coolgoose ನಲ್ಲಿ "ಶಿವ ಶಿವ ಎನ್ನದ ನಾಲಿಗೆ ಏಕೆ" ಹಾಡ್ upload ಮಾಡಿದ ಮೇಲೆ ನಾನ್ ಬೀಸಣಿಗೆ ಆಗಿಲ್ಲ ಅಂದ್ರೆ, ಎಸ್ ಜೆ ಯ ಪರಿಶ್ರಮ ಎಲ್ಲ ವ್ಯರ್ಥ. mayyam ನಲ್ಲಿ ಸುದರ್ಶನ್ ಅನ್ನೋರು ಈ ಹಾಡಿನ ಸಾಹಿತ್ಯ ಬರೆಯಲು ಯತ್ನಿಸಿದ್ದಾರೆ. ಏನೆ ಅಂದ್ರು ಕೊನೆಯ ಸಾಲ್ಗಳನ್ನು ಅರ್ಥೈಸಲು ಸಾಧ್ಯವಿಲ್ಲ.

Meera Krishnamurthy said...

ಶಾಂತಲಾ, ನಾನು 'ಶಿವ ಶಿವ ಎನ್ನದ ನಾಲಿಗೆ ಏಕೆ' ಹಾಡನ್ನ ಬಹಳ ಹಿಂದೆ ಹಾಕಿದ್ದು cooltoad ನಲ್ಲಿ, ನೀವು ಅದನ್ನ ಇತ್ತೀಚೆಗೆ ಕೇಳಿದ್ದಾ? ನಾನೂ ಓದಿದ್ದೆ ಕೆಲವರು ಈ ಹಾಡಿನ ಸಾಹಿತ್ಯ ಬರೆಯಲು ಮತ್ತು ಸ್ವರಗಳನ್ನು ಬರೆಯಲು ತುಂಬಾ ಕಷ್ಟ ಪಡುತ್ತಿದ್ದಾರೆ ಅಂತ (ಅಂದ್ರೆ non-kannadigas) ಈಗ ಇನ್ನೊಂದು ಅಪರೂಪದ ಹಾಡನ್ನ ಹಾಕಿದ್ದೇನೆ ಎಸ್.ಜೆ ದು ಕೇಳುವುದು.

ಧನ್ಯವಾದಗಳು.

Vattam said...

ಅಪರೂಪದ ಯಾವ ಹಾಡು, ಎಲ್ಲಿ ಹಾಕಿದ್ದೀರಿ ?

nishu mane said...

ಶಾಂತಲ, ನಿಮ್ಮ ಸವಾಲಿನ ಹಾಡು `ಪ್ರೇಮ ಮಧುರಾಕ್ಷರ, ಪ್ರೇಮ ಅಜರಾಮರ' ಹೌದಾ? ಉತ್ರ ಸರೀಗೆ ಗೊತ್ತಿಲ್ಲ...ನಿಮ್ಮನ್ನೇ ಕೇಳ್ತಾ ಇದೀನಿ.

ಮೀರ, ನಿಮ್ಮ ಬ್ಲಾಗ್ ಇರೋದೇ ಗೊತ್ತಿರ್ಲಿಲ್ಲ. ನಾನೂ ಜಾನಕಿ ಬೀಸಣಿಗೇನೇ. ಇನ್ಮೇಲೆ ಆಗಾಗ ಇಲ್ಲಿ ಬರ್ತಿರ್ತೀನಿ. ಥ್ಯಾಂಕ್ಸ್.

ಮೀರ.